ರಾಷ್ಟ್ರೀಯ

ಕೊರೋನಾಗೆ ಸಿಕ್ತು ದೇಶಿಯ ಮದ್ದು, ಬೆಲೆ ಎಷ್ಟು? ಎಷ್ಟು ಪರಿಣಾಮಕಾರಿ? ಎಲ್ಲಿ ಸಿಗುತ್ತೆ?

ನವದೆಹಲಿ: ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಹೆಮ್ಮಾರಿ ಕೊರೊನಾಗೆ ದೇಶೀ ಔಷಧ ಸಿಕ್ಕಿದ್ದು, ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ.

ಇಂದು 10 ಸಾವಿರಕ್ಕೂ ಹೆಚ್ಚು ಡೋಸ್ ಔಷಧವನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದೆ. ಇದು ಜೆನರಿಕ್ ಔಷಧವಾದ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಬಹುದು. ಅಲ್ಲದೇ ಸಮಸ್ಯೆ ಆಗುತ್ತಿರುವ ಬೆಡ್ ಕೊರತೆಯನ್ನು ಕಡಿಮೆ ಮಾಡಬಹುದು ಎಂದು ಎಂದು ಡಿಆರ್‌ಡಿಒ ತಿಳಿಸಿದೆ.

ಬಳಕೆ ಹೇಗೆ?
ಈ ಪೌಡರ್ ಅನ್ನು ನೀರಿನಲ್ಲಿ ಕಲಕಿ ಸೇವಿಸಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಪೌಡರ್ ಸೇವಿಸಿದ ಸೋಂಕಿತರು ಆಸ್ಪತ್ರೆಯಿಂದ ಬಹಳ ಬೇಗ ಚೇತರಿಕೆ ಕಾಣುತ್ತಿದ್ದಾರೆ. ಪ್ರತಿದಿನ 2 ಪ್ಯಾಕ್ 2ಜಿಡಿ ಔಷಧ ಪಡೆದ ಶೇ.42ರಷ್ಟು ರೋಗಿಗಳು ಕೇವಲ 3 ದಿನದಲ್ಲಿ ಆಕ್ಸಿಜನ್ ಸಪೋರ್ಟ್ ನಿಂದ ಹೊರ ಬಂದಿದ್ದಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎಷ್ಟು ಪರಿಣಾಮಕಾರಿ?

ಈ ಔಷಧ ಕೊರೊನಾ ವೈರಸ್ ಅನ್ನು ಕೊಲ್ಲುವುದಿಲ್ಲ. ವೈರಸ್ ಜೀವಕೋಶದ ಒಳಗಡೆ ಸಂಗ್ರಹಗೊಂಡು ದ್ವಿಗುಣಗೊಳ್ಳುವುದನ್ನು ತಡೆದು ಆದರ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಈ ಮೂಲಕ ವೈರಸ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಡಿಆರ್‌ಡಿಒ ತಿಳಿಸಿದೆ.

ಅನುಮತಿ ಸಿಕ್ಕಿದ್ದು ಹೇಗೆ?
ಕೋವಿಡ್ ಮೊದಲ ಅಲೆ ಹೆಚ್ಚಾದ ಸಮಯದಲ್ಲಿ ಪ್ರಧಾನಿ ಮೋದಿ ಅವರ ಸಲಹೆಯ ಮೇರೆ ಡಿಆರ್‍ಡಿಒದ ವಿಭಾಗವಾದ ದಿ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸನ್ ಆಂಡ್ ಅಲೈಡ್ ಸೈನ್ಸಸ್ ಸಂಸ್ಥೆ ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯೂಲರ್ ಆಂಡ್ ಮಾಲಿಕ್ಯುಲರ್ ಬಯೋಲಜಿ ಸಹಯೋಗದಲ್ಲಿ ಈ ಔಷಧವನ್ನು ಮೊದಲ ಪ್ರಯೋಗಕ್ಕೆ ಬಳಸಿತ್ತು.

ಪ್ರಯೋಗದ ಸಮಯದಲ್ಲಿ ಸಾರ್ಸ್-ಕೋವ್-2 ವೈರಸ್ ಮೇಲೆ ಪರಿಣಾಮಕಾರಿಯಾಗಿದ್ದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ 2020ರ ಮೇ-ಅಕ್ಟೋಬರ್ ವೇಳೆ ಎರಡನೇ ಹಂತದಲ್ಲಿ ದೇಶದ 17 ಆಸ್ಪತ್ರೆಗಳ 110 ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. 2020ರ ಡಿಸೆಂಬರ್ ನಿಂದ 2021ರ ಮಾರ್ಚ್ ಅವಧಿಯಲ್ಲಿ ಕರ್ನಾಟಕ ಸೇರಿದಂತೆ 10 ರಾಜ್ಯಗಳ 27 ಆಸ್ಪತ್ರೆಗಳಲ್ಲಿ 3ನೇ ಹಂತದ ಪ್ರಯೋಗ ನಡೆಸಲಾಗಿತ್ತು. ಪ್ರಯೋಗದ ವೇಳೆ ಉತ್ತಮ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಈಗ ತುರ್ತು ಬಳಕೆಗೆ ಅನುಮತಿ ಸಿಕ್ಕಿದೆ.

ದರ ಎಷ್ಟು?
ಈ ಪೌಡರ್ ಬೆಲೆ ಕಡಿಮೆ ಇರಲಿದೆ ಎಂದು ವರದಿಯಾಗಿದೆ. ಒಂದು ಪ್ಯಾಕ್ ಬೆಲೆ 500 – 600 ರೂ. ದರ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಔಷಧಿ ಸದ್ಯಕ್ಕೆ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಾಗಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!