ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘನೆ ವಿರುದ್ಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ

ರಾಜ್ಯ ಸರ್ಕಾರದ ಲಾಕ್ ಡೌನ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಇಟ್ಟುಕೊಂಡು ಮಾರ್ಗಸೂಚಿಯಲ್ಲಿ ಬಂದ್ ಮಾಡಬೇಕು ಎಂದು ಸೂಚಿಸಿದ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಲವಾರು ಮಂದಿಗೆ ಹಾಗೂ ನಿಗದಿಪಡಿಸಿದ ಸಮಯವನ್ನು ಮೀರಿ ಅಂಗಡಿಗಳನ್ನು ತೆರೆದವರಿಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಎಚ್ಚರಿಕೆ ನೀಡಿ ಅಂಗಡಿಗಳನ್ನು ಬಂದ್ ಮಾಡಿಸಿದ ಘಟನೆ ಬುಧವಾರ ನಡೆದಿದೆ.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಬುಧವಾರ ನಗರದ ಹಲವೆಡೆ ಅಧಿಕಾರಿಗಳ ಜೊತೆಗೆ ದಿಢೀರ್ ಕಾರ್ಯಾಚರಣೆ ನಡೆಸಿದರು. ಸಿಟಿ ಬಸ್ ನಿಲ್ದಾಣ, ಕೋರ್ಟ್ ರಸ್ತೆ, ಮಲ್ಪೆ ರಸ್ತೆ ಸೇರಿದಂತೆ ನಗರದ ಹೃದಯ ಭಾಗಗಳಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದವರಿಗೆ ಎಚ್ಚರಿಕೆ ನೀಡಿ ಅಂಗಡಿ ಮುಚ್ಚಿಸಿದ್ದಾರೆ.

ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡುವವರಿಗೂ ಬಿಸಿ ಮುಟ್ಟಿಸಿದ ಜಿಲ್ಲಾಧಿಕಾರಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡವನ್ನು ಕೂಡ ವಿಧಿಸಲಾಗಿದೆ.


ಅಗತ್ಯ ವಸ್ತುಗಳ ಖರೀದಿಗೆ ಮನೆಯ ಹತ್ತಿರ ಇರುವ ಅಂಗಡಿಗಳಿಗೆ ಹೋಗಿ ಎಂದು ಲಾಕ್ ಡೌನ್ ಆರಂಭವಾದ ಸಂದರ್ಭದಲ್ಲಿ ಹೇಳಿರುವ ಜಿಲ್ಲಾಧಿಕಾರಿಯವರು ಮಂಗಳವಾರ ಮತ್ತೊಮ್ಮೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರೆ ನೀಡಿದರು.