ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್

ಗಾಜಾ ಪಟ್ಟಿಯಲ್ಲಿ ಹನ್ನೊಂದು ದಿನಗಳಿಂದ ನಡೆಸುತ್ತಿದ್ದ ವೈಮಾನಿಕ ದಾಳಿಗೆ ಇಸ್ರೇಲ್ ಅಂತ್ಯ ಹಾಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ವೈಮಾನಿಕ ದಾಳಿಗಳನ್ನು ನಿಲ್ಲಿಸಿ ಕದನ ವಿರಾಮಕ್ಕೆ ಅನುಮೋದನೆ ನೀಡಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿದೆ.
ಗಾಜಾ ಪಟ್ಟಿಯಲ್ಲಿನ ಹಮಾಸ್ ಉಗ್ರರು ಇಸ್ರೇಲ್ ಮೇಲೆ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಆರಂಭವಾದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸುಮಾರು 230 ಪ್ಯಾಲೆಸ್ತೀನಿಯನ್ನರು ಹತರಾಗಿದ್ದರು. ಇಸ್ರೇಲ್ ದಾಳಿ ನಿಲ್ಲಿಸುವಂತೆ ಅಮೆರಿಕ ಸೇರಿದಂತೆ ಹಲವು ದೇಶಗಳು ಮನವಿ ಮಾಡಿದ್ದವು. ಆದರೆ ನಮ್ಮ ಗುರಿ ಮುಟ್ಟುವವರೆಗೂ ವಿರಮಿಸುವುದಿಲ್ಲ ಎಂಬ ಧೋರಣೆಯನ್ನು ಇಸ್ರೇಲ್ ತಳೆದಿತ್ತು.
ಶಾಂತಿ ಸ್ಥಾಪನೆಗಾಗಿ ಈಜಿಫ್ಟ್ ಸೇರಿದಂತೆ ಕೆಲ ದೇಶಗಳು ಮಧ್ಯಸ್ಥಿಕೆ ವಹಿಸಿದ್ದವು. ಜೊತೆಗೆ ಅಮೆರಿಕದಿಂದ ಒತ್ತಡ ಹೆಚ್ಚಾಗುತ್ತಿತ್ತು. ಹೀಗಾಗಿ ತಡರಾತ್ರಿ ಸಭೆ ನಡೆಸಿದ ನೆತನ್ಯಾಹು, ಈಜಿಫ್ಟ್ ಪ್ರಸ್ತಾವನೆಯನ್ನು ಅಂಗೀಕರಿಸಿ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಇಸ್ರೇಲ್ ಕದನ ವಿರಾಮಕ್ಕೆ ಅಂಗೀಕರಿಸುತ್ತಿರುವ ನಿರ್ಧಾರ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಹಮಾಸ್ ಉಗ್ರ ಸಂಘಟನೆ, ಇಸ್ರೇಲ್ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದೆ.