ರಾಜ್ಯ

ಕಪ್ಪು ಶಿಲೀಂದ್ರ ಸಾಂಕ್ರಾಮಿಕ ರೋಗವಲ್ಲ, ಯಾರೂ ಆತಂಕಗೊಳ್ಳದಿರಿ: ಸಚಿವ ಸುಧಾಕರ್

ದಾವಣಗೆರೆರಾಜ್ಯದ ಕೆಲವು ಕಡೆಗಳಲ್ಲಿ ಕಪ್ಪು ಶಿಲೀಂಧ್ರ ಸೋಂಕು ಕಂಡುಬಂದಿದೆ. ಇದು ಸಾಂಕ್ರಾಮಿಕ ರೋಗವೇನಲ್ಲ. ಹಾಗಾಗಿ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ದಾವಣಗೆರೆಗೆ ಭೇಟಿ ನೀಡಿದ್ದ ಸಚಿವ ಸುಧಾಕರ್‌ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿಯೂ ಈವರೆಗೆ 15 ರಿಂದ 20 ಜನರಲ್ಲಿ ಈ ರೋಗವು ಕಾಣಿಸಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಕಪ್ಪು ಶಿಲೀಂಧ್ರ ರೋಗ ಸೋಂಕಿಗೆ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಸೋಂಕು ನಿವಾರಣೆಗೆ ಅಗತ್ಯವಿರುವ ಔಷಧಿ ಪೂರೈಕೆಗೂ ಕ್ರಮ ವಹಿಸಲಾಗಿದೆ ಮತ್ತು ಇದು ಸಾಂಕ್ರಾಮಿಕ ರೋಗವೇನಲ್ಲ. ಹಾಗಾಗಿ ಯಾರೂ ಕೂಡ ಆತಂಕ ಪಡಬೇಡಿ ಎಂದು ತಿಳಿಸಿದರು.

ಕೆಲವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದ ಕಪ್ಪು ಶಿಲೀಂಧ್ರ ರೋಗ ಬರುತ್ತದೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 3, 7, 15 ದಿನಗಳ ಅವಧಿಯಲ್ಲಿ ಅವರಿಗೆ ಯಾವ ಬಗೆಯ ಪರೀಕ್ಷೆ ಮಾಡಬೇಕು ಎಂಬುದರ ಬಗ್ಗೆಯೂ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸಬಾರದು. ಈಗಾಗಲೇ ಕೋವಿಡ್‍ನಿಂದ ಮಾನಸಿಕವಾಗಿ ಆತಂಕದಲ್ಲಿರುವ ಸಮಾಜದಲ್ಲಿ ಇನ್ನಷ್ಟು ಭಯದ ವಾತಾವರಣ ಕಲ್ಪಿಸಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಗಳ ವ್ಯವಸ್ಥೆ ಸೇರಿದಂತೆ ಆಕ್ಸಿಜನ್ ಹಾಗೂ ಔಷಧದ ಪೂರೈಕೆಗಳು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ದಾವಣಗೆರೆ ಸಂಸದರಾದ ಜಿ ಎಂ ಸಿದ್ದೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಬಿ ಎ ಬಸವರಾಜು ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker