ಕರಾವಳಿ

ಮೇ 24ರ ಬೆಳಗ್ಗೆ 6 ರಿಂದ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್144(3)ಜಾರಿ: ಜಿಲ್ಲಾಧಿಕಾರಿ

ಉಡುಪಿ ಮೇ.23: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ್ನು ಪರಿಣಾಮ ಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಮೇ 24ರ ಬೆಳಗ್ಗೆ 6 ರಿಂದ ಉಡುಪಿ ಜಿಲ್ಲೆಯಾದ್ಯಂತ ಸಿಆರ್‌ಪಿಸಿ ಸೆಕ್ಷನ್144(3)ನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದಲ್ಲಿಮುಂದಿನ ಆದೇಶದವರೆಗೆ ಹಲವು ಮಾರ್ಗಸೂಚಿಗಳನ್ನು ಅವರು ಹೊರಡಿಸಿದ್ದಾರೆ. ಈ ಮಾರ್ಗಸೂಚಿಗಳು ಮೇ 24ರ ಬೆಳಗ್ಗೆ 6ರಿಂದ ಜೂ.7ರ ಬೆಳಗ್ಗೆ 6ರವರೆಗೆ ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ. ಅದರಂತೆ, ಆಹಾರ, ದಿನಸಿ,ಹಣ್ಣುಗಳು ಹಾಗೂ ತರಕಾರಿ, ಮಾಂಸ ಮತ್ತು ಮೀನು, ಜಾನುವಾರುಗಳಿಗೆ ಮೇವಿನ ಅಂಗಡಿಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೆ ಅವಕಾಶವಿದೆ. ಈ ಅವಧಿಯಲ್ಲಿ ಮದ್ಯದಂಗಡಿಗಳಿಂದ ಪಾರ್ಸೆಲ್ ಕೊಂಡು ಹೋಗಲು ಅವಕಾಶವಿದೆ. ತಳ್ಳುಗಾಡಿಗಳ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾರಾಟ ಮಾಡಬಹುದು. ಅದೇ ಸಮಯದಲ್ಲಿ ಹಾಪ್‌ಕಾಮ್ಸ್, ಕೆಎಂಎಫ್ ಹಾಲಿನ ಬೂತ್‌ಗಳು ಕಾರ್ಯನಿರ್ವಹಿಸಬಹುದು. ಬ್ಯಾಂಕುಗಳು ಮತ್ತು ವಿಮಾಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗಳೊಂದಿಗೆ ಕರ್ತವ್ಯ ನಿರ್ವಹಿಸಲು,ಎಟಿಎಂ ಕಾರ್ಯಾಚರಿಸಲು ಅವಕಾಶವಿದೆ. ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಹಾಗೂ ಹೋಮ್ ಡೆಲಿವರಿ ಮಾಡಬಹುದು.ಈಗಾಗಲೇ ನಿಗದಿಯಾಗಿರುವ ಮದುವೆಯನ್ನು ಆಯಾ ಮನೆಗಳಲ್ಲೇ ಸರಳವಾಗಿ ಕುಟುಂಬದ ಸದಸ್ಯರು ಸೇರಿ 40 ನಡೆಸಬಹುದು. ಇದಕ್ಕಾಗಿ ತಹಶೀಲ್ದಾರ್‌ರಿಂದ ಅನುಮತಿ ಪತ್ರ ಪಡೆದಿರಬೇಕು. ಶವಸಂಸ್ಕಾರ, ಅಂತ್ಯಕ್ರಿಯೆಯನ್ನು ಗರಿಷ್ಠ ಐದು ಜನರೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ನಿರ್ವಹಿಸಲು ಅನುಮತಿ ನೀಡಲಾಗಿದೆ.

ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಲು ಮುಖಗವಸುನ್ನು ಕಡ್ಡಾಯವಾಗಿ ಧರಿಸಬೇಕು. ಕೈಗಳ ನೈರ್ಮಲ್ಯ ಹಾಗೂ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಮಾರ್ಗಸೂಚಿ ಳನ್ನು ಎಲ್ಲರೂ ಅನುಸರಿಸಬೇಕು. ಸೋಂಕು ಹರಡುವಿಕೆ ತಡೆಗಟ್ಟಲು ಮಾಸ್ಕ್ ಧರಿಸುವುದು ಅತ್ಯವಶ್ಯಕ ಕ್ರಮವಾಗಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳ ವಿರುದ್ಧ ದಂಡ ವಿಧಿಸಲಾಗು ವುದು ಎಂದು ತಿಳಿಸಿದ್ದಾರೆ. ಇದರೊಂದಿಗೆ ನಿಗದಿಯಾಗಿರುವ ವಿಮಾನ ಮತ್ತು ರೈಲು ಪ್ರಯಾಣಗಳನ್ನು ಹೊರತು ಪಡಿಸಿ ಉಳಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಟೋ, ಕ್ಯಾಬ್, ಟ್ಯಾಕ್ಸಿಗಳ ಮೂಲಕ ರೈಲು ಮತ್ತು ವಿಮಾನ ನಿಲ್ದಾಣಗಳಿಗೆ ಮಾತ್ರ ಸಂಚರಿಸಬೇಕಾಗಿದೆ. ಇದಕ್ಕಾಗಿ ಸೂಕ್ತ ಟಿಕೇಟ್ ದಾಖಲೆಗಳನ್ನು ಹೊಂದಿರಬೇಕು.

ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ,ತರಬೇತಿ ಸಂಸ್ಥೆಗಳು ಮುಚ್ಛಲ್ಪಡುತ್ತವೆ. ಆನ್‌ಲೈನ್ ಹಾಗೂ ದೂರಶಿಕ್ಷಣಕ್ಕೆ ಮಾತ್ರ ಅನುಮತಿ ಇದೆ. ಪೊಲೀಸ್, ಸರಕಾರಿ ಅಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗಳಿಗೆ, ಕ್ವಾರಂಟೈನ್ ವ್ಯಕ್ತಿಗಳಿಗೆ ಮಾತ್ರ ಹೊಟೇಲ್, ರೆಸ್ಟೋರೆಂಟ್, ಅತಿಥಿಗೃಹಗಳ ಸೇವೆಗಳನ್ನು ಬಳಸಲು ಅವಕಾಶವಿರುತ್ತದೆ. ಹೊಟೇಲ್‌ಗಳಿಗೆ ಪಾರ್ಸೆಲ್ ಸೇವೆ ಹಾಗೂ ಹೋಮ್ ಡೆಲಿವರಿ ಸೇವೆಗೆ ಮಾತ್ರ ಅವಕಾಶವಿದೆ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ ಸಮಾರಂಭಗಳಿಗೆ ನಿಷೇಧವಿದೆ. ಎಲ್ಲಾ ಧಾರ್ಮಿಕ, ಪೂಜಾ ಸ್ಥಳಗಳು ಸಾರ್ವಜನಿಕರಿಗೆ ಮುಚ್ಚಿರುತ್ತವೆ. ಸಿನೆಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಕ್ರೀಡಾಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಉದ್ಯಾನವ, ಕ್ಲಬ್, ಚಿತ್ರಮಂದಿರ, ಬಾರ್, ಸಭಾಂಗಣಗಳು ಸಂಪೂರ್ಣ ಮುಚ್ಚಿರುತ್ತವೆ.

ಕಚೇರಿಗಳಲ್ಲಿ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ಬಂದಿಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಕಂದಾಯ ಮುಂತಾದ ಕಚೇರಿಗಳು ತೆರೆದಿರುತ್ತವೆ. ವಿದ್ಯುತ್. ನೀರಾವರಿ, ನೈರ್ಮಲ್ಯದಂತ ಅಗತ್ಯ ಸೇವೆ ಗಳನ್ನು ಪೂರೈಸುವ ಹಾಗೂ ನಿರ್ವಹಿಸುವ ಕಚೇರಿಗಳೂ ತೆರೆದಿರುತ್ತವೆ. ಎಲ್ಲಾ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಕ್ಲಿನಿಕ್, ಲ್ಯಾಬ್, ಟೆಲಿಮೆಡಿಸಿನ ಸೌಲಭ್ಯಗಳು, ಔಷಧಾಲಯ ಗಳು, ಜನ ಔಷಧಿ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು ತೆರೆದಿರುತ್ತವೆ.ಅನುಮತಿಸಲಾದ ಸಂಚಾರ ವನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕ ಅಥವಾ ಖಾಸಗಿ ಬಸ್ಸುಗಳ ಹಾಗೂ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿರ್ಬಂಧಿ ಸಲಾಗಿದೆ. ತುರ್ತು ಸಂದರ್ಭಗಳಲ್ಲಿ, ಅನುಮತಿ ಹೊಂದಿರುವ ವಾಹನಗಳಿಗೆ ಮಾತ್ರ ಜಿಲ್ಲೆಯೊಳಗೆ ಹಾಗೂ ಹೊರಜಿಲ್ಲೆಗಳಿಗೆ ಪ್ರಯಾಣಿಸಲು ಅನುಮತಿನೀಡಲಾಗಿದೆ. ಕೋವಿಡ್‌ನ ಸಮರ್ಪಕ ನಿರ್ವಹಣೆಗಾಗಿ ರಾಷ್ಟ್ರೀಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶಗಳನ್ನು ಪಾಲಿಸದವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ವಿಕೋಪ ನಿರ್ವಹಣೆ ಕಾಯ್ದೆ 2005, ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗ ಕಾಯ್ದೆ 2020 ಹಾಗೂ ಐಪಿಸಿ ಸೆಕ್ಷನ್ 188ರ ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker