ರಾಜ್ಯ

ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸಲು ದಿಟ್ಟ ಹೆಜ್ಜೆಗೆ ತೀರ್ಮಾನ: ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌

ಬೆಂಗಳೂರು ಮೇ 26: ರಾಜ್ಯವನ್ನು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬಿಗೊಳಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯಿಂದ ನೂತನ ಆಮ್ಲಜನಕ ಘಟಕಗಳ ಉತ್ಪಾದನೆ ಪ್ರೋತ್ಸಾಹಿಸಲು ಉತ್ತೇಜನ ಯೋಜನೆಯನ್ನು ತರಲು ಚಿಂತನೆ ನಡೆದಿದೆ *ಎಂದು ರಾಜ್ಯದ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ಮತ್ತು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್‌ ಶೆಟ್ಟರ್‌* ತಿಳಿಸಿದರು.

ಇಂದು ವಿಧಾನಸೌಧದಲ್ಲಿ ರಾಜ್ಯದಲ್ಲಿನ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ಸಚಿವ ಜಗದೀಶ್‌ ಶೆಟ್ಟರ್‌ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ವಿಷಯ ತಿಳಿಸಿದರು.

ಕೇಂದ್ರ ಸರಕಾರದೊಂದಿಗೆ ನಿರಂತರ ಮಾತುಕತೆ ಸಫಲವಾಗಿದ್ದು ರಾಜ್ಯಕ್ಕೆ 1200 ಮೆಟ್ರಿಕ್‌ ಟನ್‌ ದ್ರವೀಕೃತ ಆಮ್ಲಜನಕವನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಆಮ್ಲಜನಕ ಉತ್ಪಾದನೆ ಹಾಗೂ ಸರಬರಾಜು ಉಸ್ತುವಾರಿ ವಹಿಸಿಕೊಂಡ ನಂತರ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕದ ಅವಶ್ಯಕತೆ ಇದೆ ಎನ್ನುವುದರ ಬಗ್ಗೆ ಕೇಂದ್ರ ಸರಕಾರ ಹಾಗೂ ಕೇಂದ್ರ ಸಚಿವರಾದ ಪಿಯೂಶ್‌ ಗೋಯೆಲ್‌, ಪ್ರಹ್ಲಾದ್‌ ಜೋಷಿ ಮತ್ತು ಸದಾನಂದಗೌಡ ಅವರೊಂದಿಗೆ ನಿರಂತರ ಸಂಪರ್ಕ ಮತ್ತು ಮಾತುಕತೆಯನ್ನು ನಡೆಸಿದ್ದೆವು. ಇದೇ ವೇಳೆ, ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ರಾಜ್ಯದಲ್ಲಿಯೇ ಬಳಸಿಕೊಳ್ಳುವಂತೆ ಅನುವು ಕೂಡಾ ಮಾಡಿ ಕೊಡಲಾಗಿದೆ ಎಂದು ಹೇಳಿದರು.

1200 ಎಂ.ಟಿ ದ್ರವೀಕೃತ ಆಮ್ಲಜನಕ ನಿಗದಿಗೊಳಿಸಿರುವಲ್ಲಿ ರಾಜ್ಯದಿಂದ 830 ಎಂ.ಟಿ, ರಾಜ್ಯದಲ್ಲಿನ ಎಂ.ಎಸ್‌.ಎಂ.ಇ ಪಿಎಸ್‌ಎ 60 ಎಂ.ಟಿ, 240 ಎಂ.ಟಿ ಯನ್ನು ಮಹರಾಷ್ಟ್ರ ಹಾಗೂ 70 ಎಂ.ಟಿ ಆಮ್ಲಜನಕವನ್ನು ಒರಿಸ್ಸಾದಿಂದ ಒದಗಿಸಲು ಆದೇಶ ಹೊರಡಿಸಲಾಗಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆ ಆಗುವ ಆಮ್ಲಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಬಳಸಿಕೊಳ್ಳಲು ಅನುಮತಿ ನೀಡಿರುವುದರಿಂದ ಸಾಗಾಣಿಕಾ ಸಮಯ ಉಳಿಯಲಿದೆ ಎಂದರು.

*ಕೈಗಾರಿಕಾ ಇಲಾಖೆಯಿಂದ ಉತ್ತೇಜನ ಯೋಜನೆ:*
ರಾಜ್ಯದಲ್ಲಿ ಆಮ್ಲಜನಕದ ಉತ್ಪಾದನೆಯನ್ನ ಹೆಚ್ಚಿಸುವ ಉದ್ದೇಶದಿಂದ ನೂತನ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಆಕರ್ಷಕ ಉತ್ತೇಜನ ನೀಡಲು ಯೋಜನೆ ರೂಫಿಸುವಂತೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ವಿಸ್ತ್ರುತ ಮಾಹಿತಿಯನ್ನು ನೀಡಲಾಗುವುದು ಎಂದರು.

*ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸ್ಟೋರೇಜ್‌ ಗೆ ಯೋಜನೆ ರೂಫಿಸಲು ಸೂಚನೆ:*
ಜಿಲ್ಲೆಗಳಲ್ಲಿ ಆಮ್ಲಜನಕ ಬಫರ್‌ ಸ್ಟಾಕ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ 20 ಎಂ.ಟಿಗಳಷ್ಟು ಸ್ಟೋರೇಜ್‌ ಸಾಮರ್ಥ್ಯ ಹೆಚ್ಚಿಸಿದರೆ ತುರ್ತು ಸಂಧರ್ಭಗಳಲ್ಲಿ ಬಳಸಿಕೊಳ್ಳಲು ಅನುಕೂಲ ವಾಗಲಿದೆ ಎಂದರು.

ಆಯಾ ಜಿಲ್ಲೆಗಳಲ್ಲಿ ಇರುವ ಸಕ್ರೀಯ ಪ್ರಕರಣಗಳ ಆಧಾರದ ಮೇಲೆ ಆಮ್ಲಜನಕವನ್ನು ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ದಿನ ಆಯಾ ಆಸ್ಪತ್ರೆಗಳಿಗೆ ನಿಗದಿ ಪಡಿಸಲಾಗಿರುವ ಪ್ರಮಾಣದಲ್ಲಿ ಆಮ್ಲಜನಕ ರವಾನೆ ಆಗುತ್ತಿರುವ ಬಗ್ಗೆ ಮಾಹಿತಿಯನ್ನು ತಗೆದುಕೊಳ್ಳಲಾಗುತ್ತಿದೆ. ಕಳೆದ 5 ದಿನಗಳಲ್ಲಿ ಕ್ರಮವಾಗಿ 889.93, 855.21, 1062.71, 899.22 ಮತ್ತು 728.36 ಎಂಟಿ ಆಮ್ಲಜನಕ ರಾಜ್ಯಕ್ಕೆ ದೊರಕಿದೆ. ಒಟ್ಟಾರೆಯಾಗಿ ಸರಾಸರಿಯಾಗಿ 887.08 ಎಂ.ಟಿಗಳಷ್ಟು ಆಮ್ಲಜನಕ ದೊರೆತಿದೆ ಎಂದು ಹೇಳಿದರು.

ಕೇಂದ್ರ ಸಹಕಾರದಿಂದ 150 ಎಂ.ಟಿಗಳಷ್ಟು ಎಲ್‌ ಎಂ ಓ ಮಂಗಳೂರು ಬಂದರಿಗೆ ಬಂದು ತಲುಪಿದೆ. ಕೇಂದ್ರ ಸರಕಾರದ ಸಹಕಾರದಿಂದ ರಾಜ್ಯಕ್ಕೆ ರೈಲುಗಳಲ್ಲಿ ರವಾನೆಯಾಗುತ್ತಿರುವ ಆಮ್ಲಜನಕದಿಂದ ರಾಜ್ಯದ ಆಮ್ಲಜನಕ ಪರಿಸ್ಥಿತಿ ದಿನೇ ದಿನೇ ಸುಧಾರಿಸುತ್ತಿದೆ.

*4 ಐಎಸ್‌ಓ ಟ್ಯಾಂಕರ್‌ಗಳ ರವಾನೆ:*
ಶನಿವಾರದಂದು ಒರಿಸ್ಸಾದ ಕಳಿಂಗಾ ನಗರದಿಂದ ಇನ್ನೂ 4 ಐಎಸ್‌ಓ ಟ್ಯಾಂಕರ್‌ ಗಳು ಬರುವ ನಿರೀಕ್ಷೆ ಇದೆ. ಇದರಿಂದ ನಮ್ಮ ರಾಜ್ಯದಲ್ಲಿ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಾಗಲಿದೆ.

ಯಾದಗಿರಿ ಮತ್ತು ಕೋಲಾರದಲ್ಲಿ 500 ಎಲ್‌ಪಿಎಂ ಆಕ್ಸಿಜನ್‌ ಜನರೇಟರ್‌ ಕಾರ್ಯಾರಂಭವಾಗಿದೆ. ಬೋಯಿಂಗ್‌ ಸಹಯೋಗದಲ್ಲಿ ಕಲಬುರ್ಗಿ ಇಎಸ್‌ಐ ಆಸ್ಪತ್ರೆಯಲ್ಲಿ 1000 ಎಲ್‌ಪಿಎಂ ಆಕ್ಸಿಜನ್‌ ಜನರೇಟರ್‌ ಪ್ಲಾಂಟನ್ನು ಮೇ 22 ರಿಂದ ಕಾರ್ಯಾರಂಭವಾಗಿದೆ.

*ಆಕ್ಸಿಜನ್‌ ಜನರೇಟರ್‌ ಯೂನಿಟ್‌ಗಳು:*
ಕೇಂದ್ರ ಸರಕಾರದ ವತಿಯಿಂದ ರಾಜ್ಯಕ್ಕೆ 28, ಕರ್ನಾಟಕ ಸರಕಾರ 40, ಎನ್‌ಹೆಚ್‌ಎಐ – ಡಿಆರ್‌ಡಿಓ ಸಹಕಾರದಲ್ಲಿ 26 ಆಕ್ಸಿಜನ್‌ ಜನರೇಟರ್‌ ಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

*ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ:*
ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನರುಜ್ಜೀವನ ಕಾರ್ಯವನ್ನು ನಡೆಸಲಾಗುತ್ತಿದೆ. ಯೆರಮರಸ್‌ ನಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕವನ್ನು ಖಾಸಗಿಯವರಿಗೆ ವಹಿಸಿ ಕಾರ್ಯಾರಂಭ ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

*ಅಧಿಕಾರಿಗಳ ಕಾರ್ಯ ಶ್ಲಾಘನೀಯ:*
ಆಮ್ಲಜನಕ ಸರಬರಾಜು ಹಾಗೂ ಉತ್ಪಾದನೆ ನಿಟ್ಟಿನಲ್ಲಿ ನಿಯೋಜನೆ ಗೊಂಡಿರುವ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಆಮ್ಲಜನಕದ ಕೊರತೆ ನಿವಾರಣೆ ಆಗುತ್ತಿದೆ. ಇರುವ ಕೆಲವು ಲೋಪದೋಷಗಳನ್ನು ನಿವಾರಿಸಿಕೊಂಡು ಕಾರ್ಯನಿರ್ವಹಿಸುವಂತೆ ಸಚಿವರು ಸೂಚನೆ ನೀಡಿದರು.

ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ರಾಜ್ ಕುಮಾರ್ ಖತ್ರಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಆಕ್ಸಿಜನ್ ಸರಬರಾಜು ಸಮಿತಿಯ ನೇತೃತ್ವ ವಹಿಸಿರುವ ಹಿರಿಯ ಐಎಎಸ್‌ ಅಧಿಕಾರಿ ಮೌನಿಶ್‌ ಮೌದ್ಗಿಲ್‌, ಕೆಐಎಡಿಬಿ ಸಿಇಓ ಡಾ ಶಿವಶಂಕರ್, ಡ್ರಗ್ಸ್ ಕಂಟ್ರೋಲರ್ ಅಮರೇಶ್ ತುಬಗಿ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker