
ಕುಂದಾಪುರ ಮೇ.28 : ಕೋವಿಡ್ ಲಾಕ್ ಡೌನ್ ನಡುವೆ ನಿಯಮ ಉಲ್ಲಂಘಿಸಿ ಗೋಪಾಡಿ ಗ್ರಾಮದ ಪಡುಶಾಲೆಯ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ನಡೆಸುತ್ತಿದ್ದ ಕೋಳಿ ಪಡೆಗೆ(ಅಂಕ) ಕುಂದಾಪುರ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್ಐ ಸದಾಶಿವ ಆರ್. ಗವರೋಜಿ ಅವರು ಇತರ ಸಿಬ್ಬಂದಿ ಗಳೊಂದಿಗೆ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಪರಿಶೀಲಿಸಿದಾಗ ಸ್ಥಳದಲ್ಲಿ ಸುಮಾರು 10 ಮಂದಿ ಸಾರ್ವಜನಿಕರು ಒಟ್ಟು ಸೇರಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಕೋಳಿ ಅಂಕ ನಡೆಸುತ್ತಿರುವುದು ಕಂಡು ಬಂದಿದೆ. ಈ ವೇಳೆ ಸ್ಥಳಕ್ಕೆ ಪಂಚಾಯತುದಾರರನ್ನು ಕರೆಸಿಕೊಂಡು ದಾಳಿ ನಡೆಸಿದಾಗ ಕೆಲವರು ಪರಾರಿಯಾಗಿದ್ದಾರೆ.
ಈ ವೇಳೆ ಸಂತೋಷ ಪೂಜಾರಿ(39) ರಂಗನಾಥ(36) ನಾಗರಾಜ ಮರಕಾಲ(44) ಎಂಬ ಮೂವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಆರೋಪಿಗಳ ಬಳಿ ಇದ್ದ, ಆಟಕ್ಕೆ ಬಳಸಿದ 1,550 ರೂ. ನಗದು, ಜುಗಾರಿ ಆಟಕ್ಕೆ ಬಳಸಿದ 2,000 ರೂ ಮೌಲ್ಯದ 4 ಹುಂಜ ಕೋಳಿ, ಕೋಳಿಯ ಕಾಲಿಗೆ ಕಟ್ಟಿದ 2 ಬಾಳು (ಕತ್ತಿ)9 ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿತರು ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಜಿಲ್ಲಾಧಿಕಾರಿಯವರ ಆದೇಶ ಉಲ್ಲಂಘಿಸಿ ಅಕ್ರಮ ಕೋಳಿ ಅಂಕ ಜೂಜಾಟದಲ್ಲಿ ಪಾಲುಗೊಂಡಿ ರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.