ಚೀನಾ ಮತ್ತೆ ಲಾಕ್ಡೌನ್ !

ಬೀಜಿಂಗ್ : ಕೋವಿಡ್ ಸಮಸ್ಯೆಯು ಮೊದಲ ಬಾರಿಗೆ ತಲೆದೋರಿದ ದೇಶವಾದ ಚೀನಾದಲ್ಲಿ ಮತ್ತೊಮ್ಮೆ ಲಾಕ್ಡೌನ್ ಹೇರಲಾಗಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮಕ್ಕೆ ಮುಂದಾಗಿದೆ. ದಕ್ಷಿಣ ಚೀನಾದ ಗುವಾಂಗ್‍ಶು ನಗರದಲ್ಲಿ ಕಳೆದ ವಾರವಷ್ಟೇ ಸುಮಾರು ಇಪ್ಪತ್ತು ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಬಳಿಕ ಏಕಾಏಕಿ ಏರಿಕೆ ಕಂಡು ಬಂದಿದೆ. ಹೀಗಾಗಿ ಇಲ್ಲಿನ ಯಾರೂ ಕೂಡಾ ತಮ್ಮ ಮನೆಯಿಂದ ಹೊರಬರಬಾರದೆಂದು ಆದೇಶಿಸಲಾಗಿದೆ. ಎಲ್ಲಾ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ ಬಳಿಕವೇ ಲಾಕ್ಡೌನ್ ಹಿಂಪಡೆಯಲಾಗುವುದೆಂದು ಆರೋಗ್ಯ ಇಲಾಖೆ ತಿಳಿಸಿದೆ.
ನಗರದ ಕೆಲವು ರಸ್ತೆಗಳನ್ನು ಅತಿ ಅಪಾಯಕಾರಿಗಳೆಂದು ಘೋಷಿಸಿ, ಸೀಲ್ಡೌನ್ ಮಾಡಲಾಗಿದೆ. ಶಾಲಾ–ಕಾಲೇಜು, ಮಾರುಕಟ್ಟೆ, ಪ್ರವಾಸೋದ್ಯಮ ಕೇಂದ್ರ, ಸಾರ್ವಜನಿಕ ಸ್ಥಳ ಇತ್ಯಾದಿಗಳನ್ನು ಮುಚ್ಚಲಾಗಿದೆ. ಈಗಾಗಲೇ ಏಳು ಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಭಾರತ ಸೇರಿದಂತೆ ಚೀನಾದ ನೆರೆಹೊರೆಯ ಹಲವು ದೇಶಗಳಲ್ಲಿ ಕೋವಿಡ್ ತೀವ್ರವಾಗಿ ಏರಿಯಾಗಿರುವುದರಿಂದ, ಮುಂಜಾಗರೂಕತಾ ಕ್ರಮವಾಗಿ ಚೀನಾವು ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಿತ್ತು. ಹೀಗಿದ್ದರೂ ಅವೆಲ್ಲವನ್ನೂ ಮೀರಿ ವೈರಸ್ ಗುವಾಂಗ್‍ಶು ನಗರಕ್ಕೆ ದಾಳಿಯಿಟ್ಟಿದೆ. ಇದೀಗ ಇಲ್ಲಿ ಪತ್ತೆಯಾಗಿರುವ ರೂಪಾಂತರಿತ ಕೋವಿಡ್ ವೈರಸ್, ಮೊದಲ ಬಾರಿಗೆ ಭಾರತದಲ್ಲಿ ಪತ್ತೆಯಾಗಿರುವ ಅದೇ ವೈರಸ್ ಎಂದು ವರದಿ ಹೇಳಿದೆ.