ಮೇ ತಿಂಗಳು ವಾಹನಗಳ ಟ್ಯಾಕ್ಸ್ ಕಟ್ಟುವಂತಿಲ್ಲ; ವಿನಾಯಿತಿ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು(ಮೇ 30): ಕೊರೋನಾ ಮಹಾಮಾರಿ ಜನರನ್ನು ಬೆಂಬಿಡದೆ ಕಾಡುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿದೆ. ಜೂನ್ 7ರವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ. ಈ ನಡುವೆ ವಾಹನ ಸವಾರರಿಗೊಂದು ಸಿಹಿಸುದ್ದಿ ಇದೆ. ಕೊರೋನಾ ಲಾಕ್ಡೌನ್ ಹಿನ್ನೆಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಮೇ ತಿಂಗಳ ಮೋಟಾರು ವಾಹನ ತೆರಿಗೆಯನ್ನು ಕಟ್ಟುವಂತಿಲ್ಲ. ತೆರಿಗೆ ಪಾವತಿ ಮಾಡುವುದರಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕರ್ನಾಟಕ ಸರ್ಕಾರ ವಾಹನ ಸವಾರರಿಗೆ ಈ ವಿನಾಯಿತಿ ನೀಡಿದೆ. ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯವಾಗುವಂತೆ 2021ರ ಮೇ ತಿಂಗಳ ಅವಧಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿ ಕರ್ನಾಟಕ ರಾಜ್ಯ ಸರ್ಕಾರ ಆದೇಶಿಸಿದೆ. ಹೊಸ ವಾಹನಗಳ ನೊಂದಣಿಯನ್ನು ಹೊರತುಪಡಿಸಿ ಈ ಆದೇಶ ಹೊರಡಿಸಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಖಾಸಗಿ ವಾಹನಗಳ ಸಂಚಾರಕ್ಕೂ ಸರ್ಕಾರ ನಿರ್ಬಂಧ ಹೇರಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮೇ ತಿಂಗಳ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದೆ.