ರಾಜ್ಯ

ಸಾಕ್ಷಿ ಕೊರತೆ : ನಿರಪರಾಧಿ, ನಿಷ್ಕಳಂಕರಾಗಿ ಹೊರ ಬರಲಿರುವ ಸಾಹುಕಾರ ?

ಬೆಂಗಳೂರು :ರಾಜ್ಯದ ಬಿಜೆಪಿ ಸರಕಾರವನ್ನು ಅಲ್ಲೋಲ ಕಲ್ಲೋಲವನ್ನುಂಟು ಮಾಡಿದ್ದ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಹೆಣೆದ ಸಿಡಿ ಪ್ರಕರಣ ಇದೀಗ ಸುಖಾಂತ್ಯಗೊಳ್ಳುವ ಎಲ್ಲಾ ಸಾಧ್ಯತೆ ಕಂಡುಬಂದಿದೆ.

ಸಾಕ್ಷ್ಯಾಧಾರ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಇದರ ತನಿಖೆ ನಡೆಸುತ್ತಿರುವ ಎಸ್ಐಟಿ ರಮೇಶ್ ಜಾರಕಿಹೊಳಿ ಅವರಿಗೆ ಕ್ಲಿನ್ ಚಿಟ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಇಷ್ಟರಲ್ಲೇ ಈ ಸಂಬಂಧ ಬಿ ರಿಪೋರ್ಟ್ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಮಾರ್ಚ್ ಇಪ್ಪತ್ತಾರರಂದು ಮಹಿಳೆ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು.

ಅನಂತರ ಎಸ್ಐಟಿ ಅದನ್ನು ತನಿಖೆ ಮಾಡಿತ್ತು. ಪ್ರಕರಣ ದಾಖಲಾದ ನಂತರ ಎಸ್ ಐಟಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಹಲವಾರು ಜನರ ಹೇಳಿಕೆಗಳನ್ನು ಪಡೆದುಕೊಂಡಿತ್ತು.

ಇಷ್ಟು ದಿನಗಳವರೆಗೆ ವಿಡಿಯೋದಲ್ಲಿ ಇರುವುದು ನಾನು ಅಲ್ಲ, ವೀಡಿಯೋ ನಕಲಿ ಎಂದು ಜಾರಕಿಹೊಳಿ ಪ್ರತಿಪಾದಿಸಿಕೊಂಡು ಬಂದಿದ್ದರು. ಆದರೆ ಕೆಲ ದಿನಗಳ ಹಿಂದೆ ಎಸ್ ಐಟಿ ಎದುರು ಹಾಜರಾಗಿ ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿರುವ ಬಗ್ಗೆ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿದ್ದವು.

ಈ ಬೆಳವಣಿಗೆಗಳ ಬಳಿಕ ಜಾರಕಿಹೊಳಿಯವರು ಹನಿಟ್ರ್ಯಾಪ್ ಗೆ ಒಳಗಾದ ಬಗ್ಗೆ ಚರ್ಚೆ ನಡೆದಿದೆ. ಯುವತಿ ಜಾರಕಿಹೊಳಿ ಅವರನ್ನು ಪದೇಪದೇ ಸಂಪರ್ಕಿಸಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವಂತೆ ಮಾತನಾಡಿದ್ದು ಕಂಡು ಬಂದಿದ್ದು, ಸಹಮತದ ಸಂಪರ್ಕ ಎಂಬಂತೆ ಕಂಡು ಬಂದಿದೆ.

ಇನ್ನು ಪ್ರಕರಣದ ವಿವಿಧ ಆಯಾಮ ಗಮನಿಸಿರುವ ಎಸ್ಐಟಿ ಇದು ಯುವತಿ ಮೇಲೆ ಬಲಾತ್ಕಾರದ ಪ್ರಕರಣ ಆಗಿರದೆ ಸಹಮತದ ಸಂಪರ್ಕ ಎಂದು ದಾಖಲಿಸಿದ್ದು ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಳ್ಳುವಂತಾಗಿತ್ತು.

ಇಡೀ ಪ್ರಕರಣದಲ್ಲಿ ಶ್ರವಣ ಹಾಗೂ ನರೇಶ ಪ್ರಮುಖ ಪಾತ್ರವಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಎಸ್ ಐಟಿಗೆ ಸಿಕ್ಕಿದೆ.

ಎಸ್ಐಟಿ ಕಲೆ ಹಾಕಿರುವ ಸಿಸಿಟಿವಿ ದೃಶ್ಯಗಳಲ್ಲಿ ಇವರು ಬೆಂಗಳೂರಿನ sp ರಸ್ತೆಯಲ್ಲಿ ಕ್ಯಾಮೆರಾ ಖರೀದಿಸಿರುವುದು ಸೇರಿ ಇತರ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸಿ ಅವರಿಗೆ ಜಾಮೀನು ಸಿಗದಂತೆ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ,ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲು ಕಾರಣರಾದ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಪ್ರಮುಖವಾಗಿ ಈ ಸಿಡಿ ಬಲೆ ಹೆಣೆದಿದ್ದರೆ ಎಂಬ ಗುಮಾನಿ ಹರಡಿತ್ತು. ಜತೆಗೆ ರಮೇಶ್ ಜಾರಕಿಹೊಳಿ ಪದೇಪದೆ ಮಹಾನಾಯಕ ಎಂದು ಉಲ್ಲೇಖಿಸುತ್ತಿದ್ದರು.

ಕೊನೆಗೆ ಮೌನ ಮುರಿದ ಜಾರಕಿಹೊಳಿ ಈ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಪ್ರಮುಖವಾಗಿ ಕಾರಣರಾಗಿದ್ದು ಬರುವ ವಿಧಾನಸಭಾ ಚುನಾವಣೆಯಲ್ಲಿ ಗೋಕಾಕನಲ್ಲಿ ನನ್ನ ಸಹೋದರರನ್ನು ಕಣಕ್ಕಿಳಿಸಿ ಕನಕಪುರದ ಡಿ ಕೆ ಶಿವಕುಮಾರ ಸೋಲಿಸಲು ಸರ್ವವಿಧದಲ್ಲೂ ಹೋರಾಡುವೆ ಎಂದು ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು.

ಇದೀಗ ಎಸ್ ಐಟಿ ತನಿಖೆ ಇಷ್ಟರಲ್ಲೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡುವ ಬಗ್ಗೆ ಊಹಾಪೋಹ ಹರಡುತ್ತಿದ್ದಂತೆ ಗೋಕಾಕ ಬಿಜೆಪಿ ವಲಯದಲ್ಲಿ ಉತ್ಸಾಹ ಮೂಡಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಿಂದ ನಿಷ್ಕಳಂಕರಾಗಿ ಹೊರಬರಲಿದ್ದು ಮತ್ತೆ ರಾಜ್ಯ ಸಚಿವ ಸಂಪುಟ ಸೇರಿ ಸಚಿವರಾಗಿ ಹೊರಬರುತ್ತಾರೆ ಎಂಬ ಬಗ್ಗೆ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರ್ಷೋದ್ಗಾರ ವ್ಯಕ್ತಪಡಿಸುತ್ತಿರುವ ಬೆಳವಣಿಗೆ ಕಂಡು ಬಂದಿವೆ.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker