
ಕೊರೊನಾ ನಿರ್ವಹಣೆಯಲ್ಲಿ ಆಂಧ್ರಪ್ರದೇಶ ಸರ್ಕಾರವು ಸೋಮವಾರ ಮಹತ್ತರ ನಿರ್ಧಾರವನ್ನು ತೆಗೆದುಕೊಂಡಿದೆ. ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ನಾಟಿ ವೈದ್ಯ ಬೋನಿಗಿ ಆನಂದಯ್ಯ ಕೊರೊನಾಗೆ ಸಿದ್ಧಪಡಿಸಿದ ಗಿಡಮೂಲಿಕೆ ಔಷಧಿಗೆ ಸರ್ಕಾರದ ಒಪ್ಪಿಗೆ ಸೂಚಿಸಿದೆ,
ಆನಂದಯ್ಯ ನೀಡಿದ ಪಿ, ಎಲ್ ಮತ್ತು ಎಫ್ ವರ್ಗೀಕೃತ ಔಷಧಿಗಳನ್ನು ವಿತರಿಸುವುದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆಯುರ್ವೇದ ವಿಜ್ಞಾನ ಕೇಂದ್ರ ಸಂಶೋಧನಾ ಮಂಡಳಿ (CCRAS) ಸಲ್ಲಿಸಿದ ಪ್ರಾಥಮಿಕ ಅಧ್ಯಯನ ವರದಿಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಕೊರೊನಾ ವೈರಸ್‌ಗೆ ನಾಟಿ ಔಷಧ ನೀಡುವ ಮೂಲಕ ನೆಲ್ಲೂರಿನ ಆನಂದಯ್ಯ ದೇಶದಲ್ಲಿ ಸಂಚಲನ ಸೃಷ್ಟಿಸಿ, ಭಾರೀ ಚರ್ಚೆಗೆ ಕಾರಣವಾಗಿದ್ದರು. ಈಗ ಹಲವು ಪರೀಕ್ಷೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಆನಂದಯ್ಯ ಅವರ ನಾಟಿ ಔಷಧಿಗೆ ಒಪ್ಪಿಗೆ ದೊರೆತಿದೆ.
ಆನಂದಯ್ಯ ಅವರ ನಾಟಿ ಔಷಧಿಯನ್ನು ಬಳಸುವುದರಿಂದ ಯಾವುದೇ ಹಾನಿ ಇಲ್ಲ ಮತ್ತು ಈ ಔಷಧದಿಂದ ಕೋವಿಡ್ ಸೋಂಕು ಕಡಿಮೆ ಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು CCRAS ಹೇಳಿದೆ.
ಇನ್ನು ನೆಲ್ಲೂರಿನಲ್ಲಿ ಕೊರೊನಾ ನಿಯಮಾವಳಿಗಳನ್ನು ಅನುಸರಿಸಲು ಆದೇಶಿಸಲಾಗಿದೆ. ಕೊರೊನಾ ಸೋಂಕಿತರು ಸ್ವತಃ ಆನಂದಯ್ಯ ಅವರನ್ನು ಭೇಟಿಯಾಗಿ ಔಷಧ ಪಡೆಯಬೇಕಿಲ್ಲ. ಸೋಂಕಿತರ ಸಂಬಂಧಿಕರು ಔಷಧ ತೆಗೆದುಕೊಂಡು ಹೋಗಬೇಕು ಎಂದು ಹೇಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಸಾವಿರಾರು ಜನರು ಕೊರೊನಾಗೆ ಔಷಧಿ ತೆಗೆದುಕೊಳ್ಳಲು ಹಳ್ಳಿಗೆ ಸೇರಲು ಪ್ರಾರಂಭಿಸಿದ ನಂತರ ಆನಂದಯ್ಯ ಅವರ ನಾಟಿ ಔಷಧವು ಬಿಸಿ ಬಿಸಿ ಚರ್ಚೆಯ ವಿಷಯವಾಯಿತು. ಅವರ ಔಷಧಿಗಳ ಬಗ್ಗೆ ಮರುಪರಿಶೀಲನಾ ಅಧ್ಯಯನ ಮಾಡಲು ಸರ್ಕಾರವು ನಿರ್ಧರಿಸಿತ್ತು. ಔಷಧಿ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.