ಲಾಕ್ ಡೌನ್ ವಿಸ್ತರಣೆ ಮಾಡುತ್ತೇವೆ, ಕೆಲವೊಂದು ನಿರ್ಬಂಧಗಳ ಸಡಿಲಿಕೆ ಮಾಡುತ್ತೇವೆ: ಬಿ ಎಸ್ ವೈ
ಬೆಂಗಳೂರು : ರಾಜ್ಯದಲ್ಲಿ ಕೆಲವು ದಿನಗಳಿಂದ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ನಿರಂತರವಾಗಿ ಕಡಿಮೆಯಾಗುತ್ತಿದೆ. ಆದರೂ ಸಂಭವನೀಯ ಮೂರನೇ ಅಲೆ ಹಾಗೂ ಈ ಅಲೆಯ ಗಂಭೀರತೆಯನ್ನು ಇಟ್ಟುಕೊಂಡು ಮತ್ತೊಮ್ಮೆ ರಾಜ್ಯ ಸರ್ಕಾರ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ಯೋಚನೆ ಮಾಡುತ್ತಿದೆ.
ಕೋವಿಡ್ ನ ಹೊಡೆತದಿಂದ ಈಗಾಗಲೇ ರಾಜ್ಯದ ನಾಗರಿಕ ವ್ಯವಸ್ಥೆ ಅಡಿಮೇಲಾಗಿದ್ದು, ಮತ್ತೊಮ್ಮೆ ಲಾಕ್ ಡೌನ್ ವಿಸ್ತರಣೆ ಮಾಡಿದರೇ, ಮುಂದೇನು ಎಂಬ ಪ್ರಶ್ನೆ ಕೇಳುತ್ತಾ, ಭವಿಷ್ಯದ ಪರಿಸ್ಥಿತಿಯನ್ನು ಚಿಂತೆಯಲ್ಲಿಟ್ಟುಕೊಂಡ ಕೆಲವರು ಲಾಕ್ ಡೌನ್ ಸಡಿಲಿಸಿ ಉದ್ಯೋಗಕ್ಕೆ ಅವಕಾಶ ನೀಡಿ ಎಂದು ಹೇಳುತ್ತಿದ್ದರೇ, ಮತ್ತೊಂದು ವರ್ಗ ಲಾಕ್ ಡೌನ್ ಅಗತ್ಯ ಇದೆ ಎಂದು ಹೇಳುತ್ತಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇಂದು(ಬುಧವಾರ, ಜೂನ್ 2) ಸಂಜೆ ನಡೆಯುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ ಎಸ್ ವೈ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಕೋವಿಡ್ ನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಲಾಕ್ ಡೌನ್ ನನ್ನು ವಿಸ್ತರಣೆ ಮಾಡುತ್ತೇವೆ. ಆದರೇ, ಕೆಲವೊಂದು ಕ್ಷೇತ್ರಕ್ಕೆ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತೇವೆ. ಜನರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದಿದ್ದಾರೆ.
ಇನ್ನು, ಕೆಲವೊಂದು ಸರಕುಗಳ ರಫ್ತಿಗೆ ಗುರುವಾರದಿಂದ ಅನುಮತಿಯನ್ನು ನೀಡಲಿದ್ದೇವೆ. ಹಳ್ಳಿಗಳಲ್ಲಿ ಕೋವಿಡ್ ಸೋಂಕಿನ ಹೊಸ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಯಾವುದೇ ರೀತಿಯಲ್ಲಿ ತೊಂದರೇಯಾಗದಂತೆ ಸಚಿವ ಸಂಪುಟದ ಉನ್ನತ ಮಟ್ಟದ ಸಭೆಯಲ್ಲಿ ತಜ್ಞರು ಹಾಗೂ ಅಧಿಕಾರಿಗಳ ಸಲಹೆಯನ್ನು ತೆಗೆದುಕೊಂಡು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ಬಡ ಸಮುದಾಯಗಳಿಗೆ ಕೋವಿಡ್ ಆರ್ಥಿಕ ಸಹಾಯದ ಕುರಿತಾಗಿ ಮಾತನಾಡಿದ ಅವರು, ಎರಡನೇ ಕೋವಿಡ್ ಪ್ಯಾಕೇಜ್ ನನ್ನು ಇನ್ನೊಂದೆರಡು ದಿನಗಳಲ್ಲಿ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.