ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಆಗದಿದ್ದರೆ ಲಾಕ್ಡೌನ್ ಮುಂದುವರೆಯುದು: ಡಿಸಿ ಜಿ. ಜಗದೀಶ್
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆ ಆಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಿಲ್ಲ. 38 ರಿಂದ 19ಕ್ಕೆ ಇಳಿದಿದೆ. ಜೂ. 7 ರ ಒಳಗೆ ಪಾಸಿಟಿವಿಟಿ ರೇಟ್ 10 ರ ಒಳಗೆ ಬರಬೇಕೆಂಬುದು ನಮ್ಮ ಗುರಿ. ಒಂದೊಮ್ಮೆ ಪಾಸಿಟಿವಿಟಿ ರೇಟ್ ಕಡಿಮೆಯಾಗದಿದ್ದರೆ ಲಾಕ್ಡೌನ್ ಮುಂದುವರೆಯುವುದು ಅನಿವಾರ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಕುಂದಾಪುರಕ್ಕೆ ಆಗಮಿಸಿದ ವೇಳೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಕೊರೋನಾ ಪಾಸಿಟಿವಿಟಿ ರೇಟ್ ಕಡಿಮೆ ಮಾಡಲು ಜನರ ಸಹಕಾರ ಅತೀ ಅಗತ್ಯವಾಗಿದೆ. ಅನಾವಶ್ಯಕವಾಗಿ ಓಡಾಡಿದರೆ, ನಿಯಮಗಳನ್ನು ಪಾಲಿಸದಿದ್ದರೆ ಪಾಸಿಟಿವಿಟಿ ರೇಟ್ ಕಡಿಮೆ ಆಗದು. ಸಾರ್ವಜನಿಕರು ಸರಕಾರದ ಕೋವಿಡ್ ನಿಯಮ ಪಾಲಿಸಿ, ಈ ಮೂಲಕ ಪಾಸಿಟಿವಿಟಿ ರೇಟ್ ಕಡಿಮೆ ಮಾಡುವಲ್ಲಿ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ 50 ಕ್ಕಿಂತ ಹೆಚ್ಚು ಪ್ರಕರಣಗಳಿರುವ 35 ಗ್ರಾಮ ಪಂಚಾಯತ್ ಗಳನ್ನು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಸದರ ಜೊತೆ ಚರ್ಚಿಸಿ ಸೀಲ್ ಡೌನ್ ಮಾಡಲಾಗಿದೆ. ಸೋಂಕು ಏರಿಕೆ ಹಂತದಲ್ಲಿರುವ ಕೆಲವೊಂದು ಪಂಚಾಯತ್ ಗಳು ಅವರಾಗಿಯೇ ಸ್ವಇಚ್ಛೆಯಿಂದ ನಿರ್ಬಂಧ ಹೇರುತ್ತಿವೆ. ಇದಕ್ಕೆ ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ ಎಂಬ ಭರವಸೆ ಕೊಟ್ಟಿದ್ದೇವೆ ಎಂದರು. ಎರಡು ಮೂರು ಪಂಚಾಯತ್ ಗಳಿಗೆ ಹೊಂದಿಕೊಂಡಿರುವಂತಹ ಹಳ್ಳಿಗಳನ್ನು ಸೀಲ್ ಡೌನ್ ಮಾಡುವ ಬಗ್ಗೆ ಸಿಇಓ ಅವರು ಪಂಚಾಯತ್ ಅಧ್ಯಕ್ಷರು, ಪಿಡಿಓಗಳೊಂದಿಗೆ ಮಾತನಾಡಿ ಮುಂದಿನ ಕ್ರಮ ಜರುಗಿಸಲು ಸಿಇಓಗೆ ಸೂಚಿಸಲಾಗಿದೆ ಎಂದರು.
ಯಾವ ಗ್ರಾ.ಪಂ.ನಲ್ಲಿ ಹೆಚ್ಚು ಸೋಂಕು ಕಂಡು ಬರುತ್ತದೋ ಅಲ್ಲಿಗೆ ಡಾಕ್ಟರ್ ನಡೆ, ಹಳ್ಳಿ ಕಡೆ ಯೋಜನೆ ಮೂಲಕ ವೈದ್ಯರು ತೆರಳುತ್ತಿದ್ದಾರೆ. ಆ ಹಳ್ಳಿಯನ್ನು ಸಂಪೂರ್ಣ ಪರೀಕ್ಷೆ ಮಾಡಬೇಕು ಎಂದು ತಿಳಿಸಲಾಗಿದೆ. ವೈದ್ಯರು ಈ ಕಾರ್ಯವನ್ನು ಉತ್ತಮ ರೀತಿಯಲ್ಲಿ ಕಾರ್ಯ ಮಾಡುತ್ತಿದ್ದಾರೆ ಎಂದು ಡಿಸಿ ಹೇಳಿದರು. ಈಗಾಗಲೇ 6,000 ಮಂದಿಗೆ ಸ್ಕ್ರೀನಿಂಗ್ ಮಾಡಿದ್ದು, 300 ಮಂದಿಗೆ ಪಾಸಿಟಿವ್ ಬಂದಿದೆ. ಅದರಲ್ಲಿ 50ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರು.
ಮಳೆಗಾಲದ ಪರಿಕರ ಅಂಗಡಿ, ಸರಕಾರದ ನಿರ್ಧಾರ:
7 ರ ವರೆಗೆ ಸರ್ಕಾರದ ಆದೇಶದಂತೆ ಲಾಕ್ ಡೌನ್ ಇರಲಿದೆ. ಸರ್ಕಾರದ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೂ.5 ಕ್ಕೆ ಮುಂಗಾರು ಪ್ರವೇಶಿಸಲಿದ್ದು, ಕೊಡೆ ಇತರ ಪರಿಕರಗಳು ಮನೆಯಲ್ಲಿಯೇ ಇರುತ್ತವೆ. ಅದಕ್ಕಾಗಿ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ತಿಳಿಸಿದ್ದಾರೆ.