
ಬೆಂಗಳೂರು: ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ನಾನು ರಾಜೀನಾಮೆ ಸಿದ್ಧ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾ ರೆ. ಅದರ ಜತೆಗೆ ಒಂದು ಬಲವಾದ ಎಚ್ಚರಿಕೆಯನ್ನು ಕೂಡ ತನ್ನ ವಿರೋಧಿಗಳಿಗೆ ಯಡಿಯೂರಪ್ಪನವರು ನೀಡಿದ್ದಾರೆ. ನನಗೆ ಅಪಮಾನ ಮಾಡಿ ಕೆಳಕ್ಕೆ ಇಳಿಸಲು ಪ್ರಯತ್ನಿಸಿದರೆ ಬಗ್ಗಲ್ಲ ಎಂಬ ಸ್ಟ್ರಾಂಗ್ ಸಂದೇಶ ಯಡಿಯೂರಪ್ಪ ಅವರು ನೀಡಿದ್ದು ಇದು ವಿರೋಧಿ ಪಾಳಯದ ಬಾಯಿ ಮುಚ್ಚಿಸುವುದಂತೂ ಗ್ಯಾರಂಟಿ..
ನಾಯಕತ್ವ ಬದಲಾವಣೆ ವಿಚಾರ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಹೀಗಿದ್ದರೂ ಈ ಬಗ್ಗೆ ಬಹಳ ಗಂಭೀರವಾದ ಹೇಳಿಕೆ ನೀಡದೇ ಇದ್ದ ಸಿಎಂ ಇಂದು ಕರ್ನಾಟಕದಲ್ಲೂ ಪರ್ಯಾಯ ನಾಯಕರಿದ್ದಾರೆ. ಎಲ್ಲಿಯವರೆಗೆ ಹೈಕಮಾಂಡ್ಗೆ ವಿಶ್ವಾಸ ಇರುತ್ತೋ ಅಲ್ಲಿಯವರೆಗೆ ಸಿಎಂ ಆಗಿ ಇರುತ್ತೇನೆ ಎಂದು ಹೇಳಿ ರಾಜೀನಾಮೆ ಸಿದ್ಧ ಎಂಬ ಸಂದೇಶವನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಈಗ ಅಪಮಾನ ಸಹಿಸಲ್ಲ ಅನ್ನುವ ಮೂಲಕ ವಿರೋಧಿಗಳ ಮೇಲೆ ಕಿಡಿ ಕಾರಿದ್ದಾರೆ.
ಅಷ್ಟಕ್ಕೂ ಇದು ಯುದ್ಧ ಕಾಲ. ಕೋರೋಣಾ ಪೀಡಿತ ದೇಶದಲ್ಲಿ ರಾಜನನ್ನು ಬದಲಿಸುವುದು ತರವಲ್ಲ. ಅದು ಸುಲಭವಲ್ಲ ಕೂಡ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಬದಲಿಸುವ ನಿಟ್ಟಿನಲ್ಲಿ ಸಿಪಿ ಯೋಗೇಶ್ವರ್ ಅಂತಹ ವ್ಯಕ್ತಿಗಳು ಚಟುವಟಿಕೆ ಶುರುಮಾಡಿದ್ದರು. ಅವರಿಗೆ ಒಂದಷ್ಟು ಬೆಂಬಲವೂ ಸಿಕ್ಕಿತ್ತು. ಆದರೆ ಯಾವ ಉದ್ದೇಶಕ್ಕಾಗಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದದಿಂದ ಕೆಳಗಿಳಿಸಬೇಕು ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಮೊದಲನೆಯದು ಇದು ಪ್ರಕ್ಷುಬ್ಧ ಕಾಲ. ಇದು ರಾಜಕೀಯ ಸ್ಥಿತ್ಯಂತರಗಳಿಗೆ ಸೂಕ್ತ ಸಮಯವಲ್ಲ. ಎರಡನೆಯದು ಇನ್ನು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನಿಗೆ ಇರುವುದು ಕೇವಲ ಎರಡು ವರ್ಷ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಮತ್ತೆ ಕರ್ನಾಟಕದಲ್ಲಿ ಸಾಮ್ರಾಜ್ಯ ಗೆಲ್ಲುವ ಚಾರ್ಮಿ ಇರುವ ಏಕೈಕ ನಾಯಕ ಬೇರೆ ಯಾರೂ ಕಾಣುತ್ತಿಲ್ಲ.ಯಡಿಯೂರಪ್ಪನವರು ಆರೋಗ್ಯದಿಂದ ಚಟುವಟಿಕೆಯಿಂದ ಇರುವವರೆಗೂ ಕರ್ನಾಟಕ ರಾಜಕೀಯದಲ್ಲಿ ಮುಖ್ಯವಾಗಿ ಬಿಜೆಪಿಯಲ್ಲಿ ಅವರ ಸ್ಥಾನವನ್ನು ತುಂಬುವ ಅಂತಹ ವ್ಯಕ್ತಿ ಈಗ ಗೋಚರಿಸುತ್ತಿಲ್ಲ. ಅರ್ಹತೆ ಇದ್ದವರು ಎಷ್ಟೋ ಜನ ಇದ್ದಾರೆ. ಆದರೆ ಅರ್ಹತೆಯ ಜೊತೆಗೆ ಅನುಭವ, ಅನುಭವದ ಜೊತೆಗೆ ತಂತ್ರಗಾರಿಕೆ, ತಂತ್ರಗಾರಿಕೆಯ ಜೊತೆಜೊತೆಗೆ ಸಾಮೂಹಿಕ ನಾಯಕರುಗಳನ್ನು ತನ್ನೆಡೆಗೆ ಸೆಳೆಯಬಲ್ಲ ವರ್ಚಸ್ಸು ಇರುವ ಬೇರೆ ಯಾವುದೇ ನಾಯಕ ಕರ್ನಾಟಕದ ಮಟ್ಟಿಗೆ ಬಿಜೆಪಿಯಲ್ಲಿ ಅಗೋಚರ. ಅದೇ ಕಾರಣಕ್ಕೆ ಕಳೆದ ಸಲ ಯಡಿಯೂರಪ್ಪನವರನ್ನು ಬಿಜೆಪಿಯಿಂದ ಹೊರಗಿಟ್ಟು, ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡದ್ದು. ಆದುದರಿಂದ ಇನ್ನು ಎರಡು ವರ್ಷಗಳ ಕಾಲ ಯಡಿಯೂರಪ್ಪನವರನ್ನು ಅಲ್ಲಾಡಿಸುವುದು ಅಸಾಧ್ಯ.