
ಜೂ.7 (Udupi News) : ಜಿಲ್ಲಾ ಮಟ್ಟದಲ್ಲಿ ಇರುವ ಕೋವಿಡ್ ಸೋಂಕಿನ ವಸ್ತುಸ್ಥಿತಿಯನ್ನು ಆದರಿಸಿ ಜೂನ್ 14ರ ನಂತರ ಯಾವ ರೀತಿ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯಲಿರುವ ಹಿರಿಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಆಗಲಿದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ಲಾಕ್ ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಲಹೆ-ಸೂಚನೆಗಳು ಬರುತ್ತಿವೆ ಎಂದರು. ಎಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇದೆ? ಯಾವ ಜಿಲ್ಲೆಯಲ್ಲಿ ಕಡಿಮೆ ಇದೆ ? ಅಂತಹ ಜಿಲ್ಲೆಗಳಲ್ಲಿ ಸಡಿಲಿಕೆ ಕ್ರಮ ಗಳನ್ನು ಜರುಗಿಸಬೇಕು ಎಂಬ ಸಲಹೆ ಬಂದಿದೆ. ಕೈಗಾರಿಕಾ ವಲಯದಿಂದಲೂ ಸಹಿತ ಹಲವು ಸಲಹೆಗಳು ಬಂದಿವೆ ಹೀಗಾಗಿ ಬೆಂಗಳೂರು ನಗರ ಸೇರಿದಂತೆ ಜಿಲ್ಲಾವಾರು ಕೋವಿಡ್ ವಸ್ತುಸ್ಥಿತಿಯನ್ನು ಪರಿಶೀಲನೆ ಮಾಡಿ ಅಂತಿಮವಾಗಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ನಾನು ಕೂಡ ಹೇಳಿಕೆ ಕೊಟ್ಟಿದ್ದೇನೆ. ನಮ್ಮ ರಾಜ್ಯ ಅಧ್ಯಕ್ಷರಾದ ನಳೀನ್ ಕುಮಾರ್ ಅವರು ಈಗಾಗಲೇ ಹೇಳಿಕೆ ನೀಡಿ ಯಡಿಯೂರಪ್ಪ ಅವರೇ ನಮ್ಮ ಸರ್ವಸಮ್ಮತ ನಾಯಕರು ಎಂದಿದ್ದಾರೆ. ಅದರಲ್ಲಿ ಯಾವುದೇ ಪ್ರಶ್ನೆಗಳಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇದೇ ಅಂತಿಮ ಎಂದರು.