
ಉಡುಪಿ : “ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷದವರೇ ಕೊಲೆ ಮಾಡುತ್ತಿದ್ದಾರೆ” ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯಕುಮಾರ ಸೊರಕೆ ಹೇಳಿದ್ದಾರೆ.
ಉಡುಪಿಯಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಚಿವರು, “ಉಡುಪಿ ಜಿಲ್ಲೆಯಲ್ಲಿ ವಿಚಿತ್ರಕಾರಿ ಘಟನೆಗಳು ಹೆಚ್ಚಾಗುತ್ತಿವೆ. ಕುಂದಾಪುರದ ಎಡಮೊಗೆಯಲ್ಲಿ ನಡೆದ ಕೊಲೆಯೇ ಇದಕ್ಕೆ ಸಾಕ್ಷಿ. ಬಿಜೆಪಿ ಕಾರ್ಯಕರ್ತರನ್ನು ಅವರ ಪಕ್ಷದವರೇ ಕೊಲೆ ಮಾಡುತ್ತಿದ್ದಾರೆ. ಪಂಚಾಯತ್‌ನಿಂದ ಆಗುತ್ತಿದ್ದ ತೊಂದರೆಗಳ ಬಗ್ಗೆ ಟೀಕಿಸಿದ್ದಕ್ಕೆ ಕೊಲೆಯಾಗಿದೆ” ಎಂದು ಹೇಳಿದರು.
ಇಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರೇ ಕೊಲೆ ಮಾಡಿದ್ದಾರೆ. ಈಗಾಗಲೇ ನಾಲ್ಕು ಮಂದಿಯ ಬಂಧನವಾಗಿದೆ, ಇದರಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆ ಎಂದರು.
“ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೇಲೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಕಾಂಗ್ರೆಸ್ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರು ಕೊಲೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಕಾಂಗ್ರೆಸ್ ಕೊಲೆಗಳಿಗೆ ಬೆಂಬಲ ಕೊಡುತ್ತಿದೆ ಎಂದು ಅಪಪ್ರಚಾರ ಮಾಡಿದರು. ಉಡುಪಿ ಜಿಲ್ಲೆಯ ಮೂರು ಘಟನೆಯನ್ನು ಮೆಲುಕು ಹಾಕಿದರೆ ಸತ್ಯ ತಿಳಿಯುತ್ತದೆ” ಎಂದು ತಿಳಿಸಿದರು.
ಪ್ರವೀಣ್ ಪೂಜಾರಿ ಕೊಲೆ ಪ್ರಕರಣ, ಕೋಟ ಅವಳಿ ಕೊಲೆ ಪ್ರಕರಣ, ಎಡಮೊಗೆ ಕೊಲೆ ಪ್ರಕರಣ ಈ ಮೂರೂ ಪ್ರಕರಣಗಳಲ್ಲಿ ಕೊಲೆ ಮಾಡಿದ ಎಲ್ಲಾ ಆರೋಪಿಗಳು ಬಿಜೆಪಿಗೆ ಸೇರಿದವರಾಗಿದ್ದಾರೆ.
“ಎಡಮೊಗೆ ಪ್ರಕರಣದಲ್ಲಿ ಬಿಜೆಪಿ ಪಂಚಾಯತ್ ಅಧ್ಯಕ್ಷನೇ ಮೊದಲ ಆರೋಪಿಯಾಗಿದ್ದು, ಸಣ್ಣಪುಟ್ಟ ಘಟನೆಯಾದರೂ ಶೋಭಾ ಕರಂದ್ಲಾಜೆ ದೊಡ್ಡದಾಗಿ ಬಿಂಬಿಸುತ್ತಾರೆ. ರಾಜಕೀಯ ಲಾಭ ಪಡೆಯಲು ಹವಣಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಬಿ.ವೈ. ರಾಘವೇಂದ್ರ ಸಂತ್ರಸ್ತರ ಮನೆಗೆ ಯಾಕೆ ಭೇಟಿ ಕೊಟ್ಟಿಲ್ಲ?” ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಪ್ರಶ್ನಿಸಿದರು.
ರಾಜಕೀಯ ಹಸ್ತಕ್ಷೇಪವಿಲ್ಲದೆ ಆರೋಪಿಗಳಿಗೆ ಶಿಕ್ಷೆಯಾಗಲಿ. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇನ್ನು ಕೊಲೆ ಮಾಡಿದ ಅಧ್ಯಕ್ಷ ಪಂಚಾಯತ್ ಕಚೇರಿಯಲ್ಲಿ ಕುಳಿತುಕೊಳ್ಳಬಾರದು. ಕೊಲೆಗೈದ ಆತನನ್ನು ಶಾಶ್ವತವಾಗಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.