
ಬೆಂಗಳೂರು : ರಾಜ್ಯದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡಲಾಗುತ್ತಿದೆ.
ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ13 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಸಲಾಗುತ್ತಿದೆ.
ಅನ್ ಲಾಕ್ ಆಗುತ್ತಿರುವ 16 ಜಿಲ್ಲೆಗಳಲ್ಲಿ ಏನಿರುತ್ತೆ ಏನಿರಲ್ಲ ?
ಪಾಸಿಟಿವಿಟಿ ದರದ ಆಧಾರದ ಮೇಲೆ ನಿರ್ಭಂಧಗಳ ಸಡಿಲಿಕೆಯ ಆಧಾರ ಮೇಲೆ, ಶೇ.5ಕ್ಕಿಂತ ಕಮ್ಮಿ ಪಾಸಿಟಿವಿಟಿ ಇರುವ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಸೇರಿದಂತೆ ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಈ ಕೆಳಕಂಡಂತೆ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ.
ಈ 16 ಜಿಲ್ಲೆಗಳಲ್ಲಿ ಜೊತೆಗೆ ಶೇ.50 ರಷ್ಟು ಪ್ರಯಾಣಿಕರೊಂದಿಗೆ ಸಾರಿಗೆ ಸಂಚಾರ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳನ್ನು ಸಹ ಶೇ.50ರಷ್ಟು ಜನರೊಂದಿಗೆ ತೆರೆಯೋದಕ್ಕೂ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ. ಸಂಜೆ 5 ಗಂಟೆಯ ಒಳಗೆ ಅಂಗಡಿ ಬಾಗಿಲು ಹಾಕಿಕೊಳ್ಳಬೇಕು.
ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಮಧ್ಯಪಾನ ಹೊರತುಪಡಿಸಿ ಸಂಜೆ 5 ಗಂಟೆಯವರೆಗೆ ಶೇ.50 ರಷ್ಟು ಜನರಿಗೆ ಅವಕಾಶ. ಮಧ್ಯಪಾನ ಕೇವಲ ಪಾರ್ಸೆಲ್ ಮಾತ್ರ.
ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ, ಬಸ್ ಮತ್ತು ಮೆಟ್ರೋಗೆ ಶೇ.50ರಷ್ಟು ಜನರೊಂದಿಗೆ ಕಾರ್ಯಾಚರಣೆಗೆ ಅವಕಾಶ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಾಡ್ಜ್, ರೆಸಾರ್ಟ್ ಶೇ.50ರಷ್ಟು ಜನರೊಂದಿಗೆ ಅವಕಾಶ. ಜಿಮ್ ಗಳಲ್ಲಿ ಹವಾನಿಯಂತ್ರಣ ಇಲ್ಲದೇ ಅವಕಾಶ. ಎಲ್ಲೂ ಹವಾನಿಯಂತ್ರಿತ ಸ್ಥಳಗಳಲ್ಲಿ ಕೆಲಸ ನಿರ್ವಹಿಸುವಂತೆ ಇಲ್ಲ.
ಶೇ.5 ಕ್ಕಿಂತ ಹೆಚ್ಚು ಇರುವಂತ 13 ಜಿಲ್ಲೆಗಳಾದಂತ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ದಾವಣಗೆರೆ, ಧಾರವಾಡ, ಕೊಡಗು ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ದಿನಾಂಕ 11 ಜೂನ್ ಗೆ ನೀಡಿದ ಆದೇಶವೇ ಮುಂದುವರೆಯಲಿದೆ. ಆದ್ದರಿಂದ ಈ 13 ಜಿಲ್ಲೆಗಳಿಗೆ ಅನ್ ಲಾಕ್ ಆಗುವ ಅದೃಷ್ಟವಿಲ್ಲ.
ಶೇ.10ಕ್ಕಿಂತ ಹೆಚ್ಚಿರುವಂತ ಮೈಸೂರು ಜಿಲ್ಲೆಯಲ್ಲಿ ಈಗ ಇರುವಂತ ನಿಬಂಧನೆಗಳು ಯಥಾಸ್ಥಿತಿ ಮುಂದುವರೆಯಲಿದೆ.
ರಾಜ್ಯಾಧ್ಯಂತ ನೈಟ್ ಕರ್ಪೂ, ವಾರಾಂತ್ಯ ಕರ್ಪ್ಯೂ ಹಾಗೆಯೇ ಮುಂದುವರೆಯಲಿದೆ.
ಇಡೀ ರಾಜ್ಯದಲ್ಲಿ ನಿರ್ಬಂಧಿಸಿರುವಂತ ಚಟುವಟಿಕೆಗಳು ಯಾವುವು ಎಂದರೆ ಈಜುಕೊಳ, ಸಭೆ ಸಮಾರಂಭ, ಪೂಜಾ ಸ್ಥಳ, ಶಾಫಿಂಗ್ ಮಾಲ್, ಅಮ್ಯೂಸ್ ಮೆಂಟ್ ಪಾರ್ಕ್, ಪಬ್ ಗಳಿಗೆ ನಿರ್ಬಂಧಿಸಲಾಗಿದೆ.
ಈ ಆದೇಶವು ಜುಲೈ 5 ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೆ ಅನ್ ಲಾಕ್ ಆಗುತ್ತಿರುವ 16 ಜಿಲ್ಲೆಗಳಲ್ಲಿ ವಾರಾಂತ್ಯ ಹಾಗೂ ನೈಟ್ ಕರ್ಪ್ಯೂ ಮುಂದುವರೆಸಲಾಗಿದೆ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ತಿಳಿಸಿದ್ದಾರೆ.