ತುಳು ರಾಜ್ಯದ ಬೇಡಿಕೆಗೆ ನಮ್ಮ ಬೆಂಬಲವಿಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ನಾವೆಲ್ಲರೂ ಕರ್ನಾಟಕದವರು, ಪ್ರತ್ಯೇಕ ತುಳು ರಾಜ್ಯದ ಬೇಡಿಕೆ ನಮ್ಮ ಮುಂದಿಲ್ಲ. ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಕೂಡ ಇಲ್ಲ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಏಕೀಕರಣವಾದ ಮೇಲೆ ನಾವೆಲ್ಲ ಒಟ್ಟಾಗಿ ಇರಬೇಕು. ನಮ್ಮಲ್ಲಿನ ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು. ತುಳು ಭಾಷೆಯ ಮಾನ್ಯತೆಗೆ ನಮ್ಮ ಹೋರಾಟ ಇದೆ ಎಂದರು.
ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ.
ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಎಡಮೊಗೆ ಉದಯ ಗಾಣಿಗ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಅಪರಾಧದಲ್ಲಿ ಪಕ್ಷ, ರಾಜ, ಧರ್ಮ ರಾಜಕಾರಣ ಇಲ್ಲ. ಘಟನೆ ನಡೆದ ಮೊದಲ ದಿನವೇ ಗೃಹ ಸಚಿವ, ಎಸ್ಪಿ ಅವರಿಗೆ ಫೋನ್ ಮಾಡಿದ್ದೇನೆ ಎಂದರು.