ಕರಾವಳಿ

ಕಾರ್ಕಳದ ಅಶಕ್ತ ಮಹಿಳೆಯ ಮನೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಾಗೂ ಗುರುಬೆಳದಿಂಗಳು

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಗುಡ್ಡೆಯ ಹಳೆಮಜಲು ಎಂಬಲ್ಲಿ ಬಂಡೆಕಲ್ಲಿನ ಮೇಲೆ ಪ್ರೇಮ ಪೂಜಾರಿಯವರು ಅಸಹಾಯಕ ಜೀವನ ನಡೆಸುತ್ತಿದ್ದಾರೆ,ಯಾರೂ ಸಹಾಯ ಮಾಡದ ಈ ಮಹಿಳೆಗೆ ಸ್ಥಳೀಯ ದಲಿತ ಸಂಘರ್ಷ ಸಮಿತಿ(ಭೀಮಾ ವಾದ)ಯವರು ಮನೆ ನಿರ್ಮಿಸುತ್ತಾರೆ ಎನ್ನುವ ಸುದ್ದಿಯನ್ನು ಇತ್ತೀಚೆಗೆ ಜೈಭೀಮ್ ಚಾನೆಲ್ ಉಡುಪಿ ವರದಿ ಮಾಡಿತ್ತು.

ಈ ಕುರಿತು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಾಗೂ ಮಂಗಳೂರು ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಗೌರವಾನ್ವಿತ ಪದ್ಮರಾಜ್ ಆರ್ ರವರ ನೇತೃತ್ವದ ಗುರುಬೆಳದಿಂಗಳು ಸಂಸ್ಥೆಯ ಪ್ರಮುಖರು ಸ್ಥಳಭೇಟಿ ಮಾಡಿ ಸಮಸ್ಯೆಯನ್ನು ಪರಿಶೀಲಿಸಿದರು.

ಪ್ರೇಮ ಪೂಜಾರಿಯವರು ಕೌಟುಂಬಿಕವಾಗಿ ಸಹೋದರ, ಸಹೋದರಿಯರನ್ನು ಹೊಂದಿದ್ದಾರೆ.ಕೈಕಾಲು ಬೆರಳುಗಳು ಸಹಜವಾಗಿಲ್ಲದೆ ಅಂಗವಿಕಲರಾಗಿರುವ ಪ್ರೇಮ ಅವರಿಗೆ ಮದುವೆಯಾಗಿದ್ದು ಗಂಡ ಇವರನ್ನು ಬಿಟ್ಟು ಹೋಗಿದ್ದಾರೆ.ನಿಜಕ್ಕೂ ಬಡತನ ಮತ್ತು ಅಸಹಾಯಕತೆಯ ಸಮಸ್ಯೆಯಿದ್ದು, ಇದಕ್ಕೆ ಮುಖ್ಯ ಕಾರಣ ಕೌಟುಂಬಿಕ ಹೊಂದಾಣಿಕೆಯ ಕೊರತೆಯಾಗಿದೆ.ಕಾನೂನುಬದ್ದ ಐದು ಎಕರೆಯಷ್ಟು ಜಾಗವನ್ನು ಹೊಂದಿರುವ ಪ್ರೇಮ ಪೂಜಾರಿಯವರ ಕುಟುಂಬ ಆಂತರಿಕ ಕಿತ್ತಾಟದಿಂದಲೆ ಬದುಕನ್ನು ಹೈರಾಣಗೊಳಿಸಿಕೊಂಡಿರುವುದು ವಾಸ್ತವ.ಈ ಎಲ್ಲಾ ಮನಸ್ತಾಪಗಳಿಂದಲೆ ಮನೆ ತೊರೆದು ಬಂಡೆಯ ಮೇಲೆ ವಾಸಿಸುತ್ತಿರುವುದು ದುರದೃಷ್ಟಕರ ಸಂಗತಿ.
ದೈಹಿಕ ನ್ಯೂನ್ಯತೆಗಳು,ವಯೋಸಹಜ ಕಾರಣ,ಬಡತನ ಇವೆಲ್ಲದರಿಂದ ಏಕಾಂಗಿಯಾಗಿ ಅಸಹಾಯಕ ಪರಿಸ್ಥಿತಿಯಲ್ಲಿರುವ ಪ್ರೇಮ ಪೂಜಾರಿಯವರಿಗೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಮಾನ್ಯ ಪ್ರವೀಣ್ ಎಂ ಪೂಜಾರಿ ಹಾಗೂ ಗುರುಬೆಳದಿಂಗಳು ಸಂಸ್ಥೆಯ ಮಾನ್ಯ ರಘುನಾಥ್ ಮಾಬಿಯಾನ್‌ರವರು ಹಾಗೂ ಇನ್ನಿತರ ಪ್ರಮುಖರು ಈ ಎಲ್ಲಾ ದುಃಸ್ಥಿತಿಯಿಂದ ಒಂಟಿತನದ ಕಾಡುವಿಕೆಗೆ ಪರಿಹಾರವಾಗಿ ಸೂಕ್ತ ರೀತಿಯಲ್ಲಿ ಜೀವನಾಶ್ರಯದ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಎನ್ನುವ ಸ್ಪಷ್ಟ ಭರವಸೆಯನ್ನು ಪ್ರೇಮ ಪೂಜಾರಿಯವರು ತಿರಸ್ಕರಿಸಿದ್ದಾರೆ.ಆದರೂ ಮಾನವೀಯ ನೆಲೆಯಲ್ಲಿ ದಿನಬಳಕೆಯ ವಸ್ತುಗಳ ಕಿಟ್ ಹಾಗೂ ಕಿಂಚಿತ್ ಆರ್ಥಿಕ ಸಹಕಾರ ಮಾಡಲಾಗಿದೆ.

ಸಾಂಸಾರಿಕವಾಗಿ ದಿನಂಪ್ರತಿ ಜಟಾಪಟಿ,ಗೊಂದಲದ ಸಮಸ್ಯೆಯಿಂದ ಮುಕ್ತವಾಗಲು ಮನಸ್ಸಿಲ್ಲದಂತಿರುವ ಪ್ರೇಮ ಪೂಜಾರಿಯವರಿಗೆ ಇದೀಗ ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದವರು ಪ್ರೇಮ ಪೂಜಾರಿಯವರ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಂಡು ಮನೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಮುಂದಾಗಿದ್ದಾರೆ.ಅದೇ ರೀತಿ ಸ್ಥಳೀಯ ಸಂಘಸಂಸ್ಥೆಗಳವರೂ ಸಹಕರಿಸಲು ನಿರ್ಧರಿಸಿದ್ದಾರೆ.ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶ್ರೀ ರಮೇಶ್ ಪೂಜಾರಿ,ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಶ್ರೀಮತಿ ಜ್ಯೋತಿ ಹರೀಶ್, ಸಮಾಜಸೇವಕರಾದ ಶ್ರೀ ಶಂಕರ ಶೆಟ್ಟಿ,ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಯತೀಶ್ ಕುಮಾರ್,ಯುವವಾಹಿನಿ ಉಡುಪಿ ಮಾಜಿ ಅಧ್ಯಕ್ಷರಾದ ಶ್ರೀ ಮಂಜೇಶ್ ಕುಮಾರ್,ಸಾಮಾಜಿಕ ಮುಂದಾಳು ಶ್ರೀ ಹರೀಶ್ ಶಿವಪುರ ,ಹಾಗೂ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶಗಳೊಂದಿಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿರುವ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಾಗೂ ಗುರುಬೆಳದಿಂಗಳು ಸಂಸ್ಥೆಯು ಪ್ರೇಮ ಪೂಜಾರಿಯವರ ಸಮಸ್ಯೆಯನ್ನು ಸೂಕ್ತವಾಗಿ ಅವಲೋಕಿಸಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಸಹಕಾರ ನೀಡಲು ಖಂಡಿತಾ ಬದ್ದವಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!