
ಪತಂಜಲಿ ಮುನಿಯವರಿಂದ ಪ್ರಧಾನಿಸಲ್ಪಟ್ಟ ಯೋಗದಿಂದ ಹಿಡಿದು ಅಪಾರ ಅನುಭವ ಕೀರ್ತಿ ಜಗದಗಲಕ್ಕೆ ಪಸರಿಸಿದ ಬಿ ಕೆ ಎಸ್ ಅಯ್ಯಂಗಾರ್ ಅವರನ್ನು ನೆನಪಿಸಿ, ಪ್ರಧಾನಿ ಮೋದಿಯವರ ಒತ್ತಾಸೆಯಂತೆ ಯೋಗ ದಿನಾಚರಣೆ ವಿಶ್ವ ವ್ಯಾಪಿಯಾಗಿ ಆಚರಿಸುವ ಪ್ರಸ್ತಾವನೆ ವಿಶ್ವ ಸಂಸ್ಥೆಯಲ್ಲಿ 2015ರಲ್ಲಿ ಅಂಗೀಕಾರಗೊಂಡು ಜೂನ್ 21 ರಂದು ವಿಶ್ವಾದ್ಯಂತ ಯೋಗ ದಿನಾಚರಣೆ ಆಚರಿಸುವಂತಾಗಿ ಇದೀಗ 7ನೇ ವಿಶ್ವ ಯೋಗ ದಿನಾಚರಣೆಯನ್ನು ಪ್ರಪಂಚದಾದ್ಯಂತ ಕಾಣುವಂತಾಗಿದೆ ಎಂದು ಬ್ಯುಸಿನೆಸ್ ಟಾನಿಕ್ ಖ್ಯಾತಿಯ ಸಿ ಎ ಎಸ್ ಎಸ್ ನಾಯಕ್ ಇವರು ಅಂತಾರಾಷ್ಟ್ರೀಯ ದಿನಾಚರಣೆಯನ್ನು ದೀಪ ಪ್ರಜ್ವಲನಗೊಳಿಸಿ ಮಾತನಾಡಿದರು.
ಸಿ ಎ ನಾಯಕ್ ಇವರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಟ್ಯಬ್ದ ವರ್ಷಾಚರಣೆಯ ಪ್ರಯುಕ್ತ ಯೋಗಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಇವರು ನಡೆಸುತ್ತಿರುವ ಆನ್ಲೈನ್ ಉಚಿತ ಯೋಗ ಶಿಬಿರದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ರಾಜ್ ಘಾಟ್ ನಲ್ಲಿ ಪ್ರಧಾನಿಯವರು ಯೋಗ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿ 21 ಬೇರೆ ಬೇರೆ ಆಸನಗಳನ್ನು ಮಾಡಿ ಜಗದಗಲಕ್ಕೆ ಯೋಗವನ್ನು ಪಸರಿಸುವ ಮಹತ್ತರ ಕಾರ್ಯವೆಸಗಿದ್ದಾರೆ ಎಂದು ಶ್ಲಾಘಿಸಿದರು.
ಯೋಗ ಚಿತ್ತ ವೃತ್ತಿ ನಿರೋಧ: ಮನಸ್ಸೇ ಎಲ್ಲದಕ್ಕೂ ಕಾರಣ. ಅದನ್ನು ಹಿಡಿತದಲ್ಲಿಟ್ಟುಕೊಂಡು ಮೊದಲು ತನ್ನನ್ನು ತಾನು ಉದ್ದರಿಸಿಕೊಳ್ಳಬೇಕು.
ಅಂತರಂಗ ಬಹಿರಂಗ ಶುದ್ಧೀಕರಿಸಿ ತಮ್ಮ ತಮ್ಮ ಸ್ವಾಸ್ಥ್ಯಕ್ಕಾಗಿ ಯೋಗ ಮಾಡಿರಿ. ಜೀವನ ಶೈಲಿಯಲ್ಲಿ ಆಹಾರ, ವಿಹಾರ, ವಿಚಾರ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮನಸ್ಸು ಶಾಂತವಾಗಿದ್ದರೆ ಯಾವುದೇ ಕಾರ್ಯವನ್ನು ಜಯಿಸಬಹುದು. ಮೂರ್ಖನಿಗೆ ಬುದ್ಧಿ ಹೇಳಬಾರದು, ಅಪಾತ್ರನಿಗೆ ದಾನ ಮಾಡಬಾರದು, ನುಡಿದಂತೆ ನಡೆಯಬೇಕು. ಮಹಾತ್ಮ ದುರಾತ್ಮರ ಅಂತರ ಅರಿಯಬೇಕು. ವಿದ್ಯೆ ವಿನಯ ಒಟ್ಟಿಗೆ ಬಂದ್ರೆ ಯೋಗ್ಯತೆ. ಯೋಗ್ಯತೆ ಬಂದರೆ ಹಣ ತನ್ನಷ್ಟಕ್ಕೆ ಬರುತ್ತದೆ. ದಾನ ಮಾಡಿ ತೃಪ್ತಿ ಪಡೆಯಿರಿ ಎಂದು ನುಡಿದರು.
ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಇವರು ಪರೋಪಕ್ಕಾರಕ್ಕಾಗಿ ಸದಾ ಮಿಡಿಯುತ್ತಿರುವ ಹೃದಯವಂತರು. ಅನುದಿನವೂ ಯೋಗ ಮಾಡಿ, ಜೀವನದಲ್ಲಿ ಸುಖ ಭೋಗ ಕಡಿಮೆ ಮಾಡಿ, ಬೇಕಿರುವುದು ಆರು ಮೂರರ ಜಾಗ, ಹೆಚ್ಚಲಿ ಯೋಗದ ಚಟುವಟಿಕೆ, ಅಭ್ಯಸಿಸಿ ಯೋಗ ಒಳ್ಳೆದಾಗುವುದು ಆರೋಗ್ಯ ಎಂದು ಸುಭಾಷಿತ ರೂಪದಲ್ಲಿ ಬುದ್ಧಿ ಮಾತುಗಳನ್ನು ಹೇಳಿ ಎಲ್ಲರೂ ರೋಗದ ಗಂಡಾಂತರದಿಂದ ಪಾರಾಗಿರಿ ಎಂದು ಶುಭ ನುಡಿದರು.
ಗುರುಗಳ ಸ್ಥಾನ ಅತ್ಯಂತ ಉತ್ಕೃಷ್ಟವಾದುದು. ದೇವ ದೇವತೆಯರು ಕೂಡಾ ಗುರುಗಳ ಮಾರ್ಗದರ್ಶನದಲ್ಲೇ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಗುರುಗಳಿಗೆ ಮಹತ್ವದ ಸ್ಥಾನವಿದೆ. ಸರಳ ಸಜ್ಜನಿಕೆಯಿಂದ ಸರ್ವರ ಗೌರವಕ್ಕೆ ಪಾತ್ರರಾದ ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಇವರು ನಡೆಸುತ್ತಿರುವ ಉಚಿತ ಯೋಗ ಶಿಬಿರ ಹರಿಯುವ ನದಿಗೆ ಕಟ್ಟಿದ ಅಣೆಕಟ್ಟಿನಿಂದ ನೀರು ಒದಗಿಸಿದ ಹಾಗೆ, ಡಾ ಶೆಟ್ಟಿ ಇವರ ಸಾಹಸಕ್ಕೆ ಪುರಸ್ಕರಿಸಲೇಬೇಕು.
ದೇಹೋನ್ನತಿ, ಮನೋನ್ನತಿ, ವಿದ್ಯೋನ್ನತಿ, ವಿನಯೋನ್ನತಿ ಇವೆಲ್ಲವನ್ನೂ ಪಡೆಯಲು ಯೋಗ ಬಹಳ ಮುಖ್ಯ. ಸಂಸಾರ ಮತ್ತು ಸಂಸ್ಕಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಸಾರದಲ್ಲಿ ಸಂಸ್ಕಾರ ಇಲ್ಲದಿದ್ದರೆ ಜೀವನ ಮೌಲ್ಯ ಕಳೆದುಕೊಂಡಂತೆ ಎಂದು ಮುಖ್ಯ ಅಥಿತಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸ್ಕಾರ ಭಾರತಿ ಮಂಗಳೂರು ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಭಂಡಾರಿ ಅವರು ಅಂತರಾಷ್ಟ್ರೀಯ ಯೋಗ ದಿನಾಚಣೆಯಂದು “ಸಂಸಾರದಲ್ಲಿ ಸಂಸ್ಕಾರ” ಎಂಬ ವಿಷಯದ ಬಗ್ಗೆ ತನ್ನ
ಅಭಿಮತವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯೋಗ ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಟ್ಯಬ್ದ ವರ್ಷಾಚರಣೆಯ ಸಮಿತಿ, ಮಂಗಳೂರು ವಲಯ ಇದರ ವತಿಯಿಂದ ಯೋಗ ಗುರು ಡಾ ಎಂ ಜಗದೀಶ್ ಶೆಟ್ಟಿ ಬಿಜೈ ಇವರನ್ನು ಸಮಿತಿ ಸಂಚಾಲಕ ಉದ್ಯಮಿ ಲೋಕನಾಥ ಶೆಟ್ಟಿ ಮತ್ತು ರಾಜೇಶ್ ರಾವ್ ಸನ್ಮಾನಿಸಿದರು.
ಜರ್ಮನಿಯಿಂದ ನೇತ್ರಾವತಿ, ಕತಾರ್ ನಿಂದ ದೇವಿಪ್ರಸಾದ್ ಶೆಟ್ಟಿ, ಬೆಳಗಾವಿಯಿಂದ ನಿರ್ಮಲ, ಮಂಗಳೂರಿನಿಂದ ಸಹ ಶಿಕ್ಷಕಿ ರಾಧಿಕಾ ಎಲ್ ಕಾಮತ್, ಅಶ್ವಿನಿ ನಾಯಕ್, ಕುಶಲ, ಸುಚಿತ್ರ, ಶ್ಯಾಮಲ ರಾವ್, ಭಾರತಿ, ಸುಜಯ, ಸುಬ್ರಾಯ ನಾಯಕ್, ಮಾಧವ ಶೆಣೈ, ಹೇಮಲತ, ಕವಿತಾ ಪುತ್ರನ್, ವಿನೋದಾ ಶೆಟ್ಟಿ ಇವರು ಯೋಗದಿಂದ ತಮಗಾದ ಪ್ರಯೋಜನಗಳನ್ನು ವಿವರಿಸಿ ಯೋಗ ಗುರುಗಳನ್ನು ಅಭಿನಂದಿಸಿದರು.
ಸಮಿತಿ ಸಂಚಾಲಕ ನಾಗರಾಜ್ ಆಚಾರ್ ಸ್ವಾಗತಿಸಿ, ತಾರಾನಾಥ್ ಶೆಟ್ಟಿ ವಂದಿಸಿದರು. ಪಿ ಸುಧಾಕರ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಭಾರತಿ ಶೆಟ್ಟಿ, ಭರತ್ ರಾಜ್ ಸಹಕರಿಸಿದರು.