
8ಮಂಗಳೂರು: ಅಧಿಕ ರಕ್ತದೊತ್ತಡದ ಪರೀಕ್ಷೆಗೆಂದು ಆಸ್ಪತ್ರೆಗೆ ತೆರಳಿದ ಯುವಕನೊಬ್ಬ ಅಲ್ಲೆ ಕುಸಿದು ಬಿದ್ದು ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಕುಂಪಲ ಆಶ್ರಯ ಕೊಲನಿ ನಿವಾಸಿ ರಾಜೇಶ್ ರಾವ್ (31) ಎಂದು ಗುರುತಿಸಲಾಗಿದೆ. ರಾಜೇಶ್ ಅವರು ರಿಕ್ಷಾ ಚಾಲಕರಾಗಿದ್ದು, ಕುಂಪಲ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿದ್ದು ಅಪಾರ ಸ್ನೇಹಿತರನ್ನು ಹೊಂದಿದ್ದು, ಸಮಾಜಮುಖಿ ಕಾರ್ಯಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದರು.
ಇವರು ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಶುಕ್ರವಾರದಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತಪಾಸಣೆಗೆ ತೆರಳಿದ್ದ ವೇಳೆ ವೈದ್ಯರು ಮತ್ತೆ ಸೋಮವಾರದಂದು ತಪಾಸಣೆಗೆ ಬರಲು ತಿಳಿಸಿದ್ದರು. ಈ ಹಿನ್ನಲೆ ಇಂದು ಬೆಳಿಗ್ಗೆ ರಾಜೇಶ್ ಅವರ ಸ್ನೇಹಿತರಾದ ಪ್ರಕಾಶ್ ಕುಂಪಲ ,ಶೈಲೇಶ್ ಮೊದಲಾದವರು ರಾಜೇಶನ್ನು ನಗರದ ಖಾಸಗಿ ಆಸ್ಪತ್ರೆಗೆ ಉನ್ನತ ತಪಾಸಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ರಕ್ತದೊತ್ತಡ ತಪಾಸಣೆ ನಡೆಸುವ ವೇಳೆ ರಾಜೇಶ್ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ರಾಜೇಶ್ ಅವರ ಅಗಲಿಕೆಗೆ ಹಿಂದೂ ಜಾಗರಣಾ ವೇದಿಕೆ ಸಂತಾಪ ವ್ಯಕ್ತಪಡಿಸಿದೆ. ಮೃತ ರಾಜೇಶ್ ತಂದೆ,ತಾಯಿ, ತಂಗಿಯನ್ನು ಅಗಲಿದ್ದಾರೆ.