
ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟ ಜಗ್ಗೇಶ್ ಅವರ ಪುತ್ರ ಯತಿರಾಜ್ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.
ಚಿಕ್ಕಬಳ್ಳಾಪುರ ನಗರದ ಹೊರವಲಯದ ಹೈದರಾಬಾದ್ ಹೆದ್ದಾರಿಯ ಅಲಗುರ್ಕಿ ಬೈ ಪಾಸ್ ಬಳಿ ಅಪಘಾತ ಸಂಭವಿಸಿದೆ. ಜಗ್ಗೇಶ್ ಅವರ ಹೆಸರಿನಲ್ಲಿದ್ದ ಕಾರಿನಲ್ಲಿ ಯತಿರಾಜ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವಾಗ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬಿಎಂಡಬ್ಲ್ಯೂ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದು ಮತ್ತು ಸ್ಥಳೀಯರ ರಕ್ಷಣೆಯಿಂದ ಯತಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯತಿರಾಜ್ ಅವರು ಚಲಿಸುತ್ತಿದ್ದ ಕಾರು ವೇಗವಾಗಿ ಬರುತ್ತಿದ್ದಾಗ ಎಡಗಡೆಯಿಂದ ಬೈಕ್ ಬಂದಿದೆ. ಬೈಕ್ ತಪ್ಪಿಸಲು ಮುಂದಾದಾಗ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಾಲ್ಕು ಬಾರಿ ಪಲ್ಟಿಯಾಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಯತಿರಾಜ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.














