
ಮಧ್ಯಪ್ರದೇಶ (02-07-2021): ಮಧ್ಯಪ್ರದೇಶದಲ್ಲಿ ಸಿಧಿ ಜಿಲ್ಲೆಯ ಹಳ್ಳಿಯೊಂದರ ಗ್ರಾಮಸ್ಥರು ರಸ್ತೆ ಕಳ್ಳತನವಾಗಿದೆ ಎಂದು ದೂರು ನೀಡಿರುವ ವಿಲಕ್ಷಣ ಘಟನೆ ವರದಿಯಾಗಿದೆ.
ಒಂದು ಕಿ.ಮೀ ರಸ್ತೆ ರಾತ್ರೋರಾತ್ರಿ ಕಣ್ಮರೆಯಾಗಿದೆ ಎಂದು ಗ್ರಾಮದ ಡೆಪ್ಯುಟಿ ಸರಪಂಚ್ ಮತ್ತು ಸ್ಥಳೀಯರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಜನಪದ್ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಕಣ್ಮರೆಯಾದ ರಸ್ತೆಯ ವರದಿಯನ್ನು ತಮ್ಮ ಕಚೇರಿ ಸ್ವೀಕರಿಸಿದೆ ಎಂದು ಒಪ್ಪಿಕೊಂಡರು.
ಮಧ್ಯಪ್ರದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ಸಿಧಿ ಜಿಲ್ಲೆಯ ಮಂಜೋಲಿ ಜನ್ ಪಾಡ್ ಪಂಚಾಯತ್ ವ್ಯಾಪ್ತಿಯ ಮೆಂಡ್ರಾ ಗ್ರಾಮದಿಂದ ಈ ವಿಲಕ್ಷಣ ಘಟನೆ ವರದಿಯಾಗಿದೆ. ಸಂಪರ್ಕ ರಸ್ತೆಯನ್ನು ಗ್ರಾಮದಲ್ಲಿ ಕಾಗದಪತ್ರಗಳ ಮೇಲೆ ನಿರ್ಮಿಸಲಾಗಿದೆ. ಮತ್ತು ಇದಕ್ಕೆ ಬಿಡುಗಡೆಯಾದ ಹಣವನ್ನು ಅಧಿಕಾರಿಗಳು ನುಂಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪಂಚಾಯತ್ ದಾಖಲೆಗಳಲ್ಲಿ ಸದರಿ ಮಾರ್ಗವು 2012ರಲ್ಲಿ ಕಚ್ಛಾ ರಸ್ತೆಯನ್ನು ನಿರ್ಮಿಸಲಾಗಿದೆ. ಇದಾದ ಆರು ತಿಂಗಳ ನಂತರ 10ಲಕ್ಷ ರೂ. ಬಜೆಟ್ ನೊಂದಿಗೆ ಪಕ್ಕಾ ರಸ್ತೆಯನ್ನು ನಿರ್ಮಿಸಲಾಗಿದೆ ಎಂದು ನಮೂದಿಸಲಾಗಿದೆ.
ಈ ಬಗ್ಗೆ ದಾಖಲೆ ಪಡೆದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಈ ಮಧ್ಯೆ ರಸ್ತೆ ನಿರ್ಮಾಣ ಸಂಸ್ಥೆಯು ಭ್ರಷ್ಟಾಚಾರವನ್ನು ಬಚ್ಚಿಡಲು ಪ್ರಯತ್ನಿಸಿದೆ.