
ಮಂಗಳೂರು: ಇಲ್ಲಿನ ನೇತ್ರಾವತಿ ನದಿ ನೀರಿಗೆ ಸ್ನಾನಕ್ಕೆ ಇಳಿದ ಗದಗ ಮೂಲದ ಇಬ್ಬರು ಸಹೋದರರು ಸೋಮವಾರ ನೀರುಪಾಲಾಗಿ ಮೃತಪಟ್ಟಿದ್ದಾರೆ.
ಉಪ್ಪಿನಂಗಡಿಯಲ್ಲಿ ತೋಟದ ಕಾರ್ಮಿಕರಾದ, ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸುಬ್ಬನಹಳ್ಳಿ ನಿವಾಸಿಯಾದ ಧರ್ಮ ಮತ್ತು ಮೀನಾಕ್ಷಿ ದಂಪತಿಯ ಮಕ್ಕಳಾದ ನಿಂಗರಾಜು (16) ಮತ್ತು ಸತೀಶ್ (14) ಮೃತರು.
ಬೆಳ್ತಂಗಡಿ ತಾಲ್ಲೂಕು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಂಗರಾಜು ಹತ್ತನೇ ತರಗತಿಯಲ್ಲಿ, ಆತನ ಸಹೋದರ ಸತೀಶ್, ಪುತ್ತೂರು ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿಯಲ್ಲಿ ಓದುತ್ತಿದ್ದಾರೆ.
ಸೋಮವಾರ ಸಂಜೆ ಪೋಷಕರು ಕಾರ್ಯ ನಿಮಿತ್ತ ಪೇಟೆಗೆ ಹೋಗಿದ್ದ ಸಂದರ್ಭದಲ್ಲಿ ನದಿಯ ಆಳದ ಅರಿವೇ ಇಲ್ಲದೆ ಸಹೋದರರು ಸ್ನಾನಕ್ಕೆಂದು ನೀರಿಗಿಳಿದಿದ್ದರು. ಮೊದಲಾಗಿ ನೀರಿಗಿಳಿದಿದ್ದ ಸತೀಶ ಮತ್ತು ನಿಂಗರಾಜು ಇಬ್ಬರೂ ನೀರಿನಲ್ಲಿ ಮುಳುಗುವುದನ್ನು ಕಂಡ ಜೊತೆಗಿದ್ದ ಮತ್ತೊಬ್ಬ ಸಹೋದರ ಸಂಬಂಧಿ ಬಸವ ಎಂಬಾತ ಭಯಗೊಂಡು ಮನೆಗೆ ಬಂದು ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳೀಯರ ಸಹಕಾರ ಪಡೆದು, ನದಿಯಲ್ಲಿ ಶೋಧ ಮಾಡಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.