ಮಂಗಳೂರು: ನವ ವಿವಾಹಿತೆ ಆತ್ಮಹತ್ಯೆ ; ಪತಿಯ ಮನೆಯವರ ವರದಕ್ಷಿಣೆ ಕಿರುಕುಳವೇ ಕಾರಣ!

ಮಂಗಳೂರು, ಜು.8: ನವ ವಿವಾಹಿತೆಯೊಬ್ಬರು ತನ್ನ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜು ೬ ರಂದು ನಡೆದಿದೆ. ಉತ್ತರ ಪ್ರದೇಶ ಮೂಲದ ರಾಕೇಶ್ ಓಝಾ ಎಂಬವರ ಪತ್ನಿ ೨೬ ವರ್ಷದ ಪ್ರೀತಿ ಪಾಂಡೆ ಆತ್ಮಹತ್ಯೆ ಮಾಡಿಕೊಂಡವರು.
ಗಂಡನ ಮನೆಯವರ ನಿರಂತರ ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಪ್ರೀತಿ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯುವತಿಯ ಮನೆಯವರು ಆರೋಪಿಸಿ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರೀತಿ ಪಾಂಡೆಯ ಸಹೋದರಿ ಶಶಿಭೂಷನ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಪ್ರೀತಿ ಪಾಂಡೆ ಹಾಗೂ ರಾಕೇಶ್ ಓಝಾ ನಡುವೆ ೨೦೨೦ರ ನವೆಂಬರ್ ೨0ರಂದು ಮದುವೆಯಾಗಿತ್ತು. ಬಳಿಕ ಪ್ರೀತಿ ಪಾಂಡೆಯೊಂದಿಗೆ ಮಾವ, ಅತ್ತೆ, ಮೈದುನ, ನಾದಿನಿ ಸಹಿತ ಕುಟುಂಬದ ಎಲ್ಲರೂ ಮಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದರು. ಈ ವೇಳೆ ಪತಿ ರಾಕೇಶ್ ಓಝಾ ಹಾಗೂ ಆತನ ಮನೆಯವರು ಪ್ರೀತಿ ಪಾಂಡೆಯ ಪೋಷಕರ ಬಳಿ 5 ಲಕ್ಷ ರೂ ನಗದು ಹಾಗೂ ನಾಲ್ಕು ಚಕ್ರದ ವಾಹನವನ್ನು ವರದಕ್ಷಿಣೆಯಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ವರದಕ್ಷಿಣೆ ನೀಡದಿದ್ದರೇ ಪ್ರೀತಿ ಪಾಂಡೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.