
ಬೆಂಗಳೂರು: ಕೇಂದ್ರ ಸರ್ಕಾರ ಡಿಜಿ ಲಾಕರ್ ಹಾಗೂ ಎಂಪರಿವಾಹನ್ ಆ್ಯಪ್ಗಳನ್ನು ಸಾರ್ವಜನಿಕರು ಬಳಸಬಹುದು. ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಬುಕ್ ಸೇರಿದಂತೆ ಹಲವು ದಾಖಲೆಗಳನ್ನು ಡಿಜಿ ಲಾಕರ್ನಲ್ಲಿ ತೋರಿಸಬಹುದು.
ಇನ್ನು ಮುಂದೆ ಭೌತಿಕ ಸ್ವರೂಪದಲ್ಲೇ ಅಗತ್ಯ ದಾಖಲಾತಿಗಳನ್ನು ಪೊಲೀಸರಿಗೆ ತೋರಿಸುವ ಅಗತ್ಯ ಇಲ್ಲ. ಡಿಜಿ ಲಾಕರ್ ಅಥವಾ ಎಂ ಪರಿವಾಹನ್ ನಲ್ಲಿ ತೋರಿಸಬಹುದು ಎಂದು ಬೆಂಗಳೂರಿನಲ್ಲಿ ಹೆಚ್ಚುವರಿ ಆಯುಕ್ತ ರವಿಕಾಂತೇಗೌಡ ತಿಳಿಸಿದರು.
ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಇನ್ನು ಮುಂದೆ ಚಾಲನಾ ಪರವಾನಿಗೆ , ನೋಂದಣಿ ಪ್ರಮಾಣ ಪತ್ರ, ವಿಮೆ, ಫಿಟ್‍ನೆಸ್ ಪ್ರಮಾಣ ಪತ್ರ , ಪರ್ಮಿಟ್ , ವಾಯುಮಾಲಿನ್ಯ ಪ್ರಮಾಣ ಪತ್ರ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಸಲ್ಲಿಸಬಹುದು.
ಡಿಜಿ ಲಾಕರ್ ಅಥವಾ ಎಂಪರಿವಾಹನ್ ಅಪ್ಲಿಕೇಶನ್‍ಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ನಿಯಮ ಜಾರಿ ಮಾಡುವ ಅಧಿಕಾರಿಗಳು ಮೊಬೈಲ್‍ನಲ್ಲಿ ಡಿಜಿಟಲ್ ರೂಪದಲ್ಲಿರುವ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಧಿಕೃತ ಎಂದು ಪರಿಗಣಿಸಬೇಕು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.