
ನವದೆಹಲಿ: ದೇಶದಲ್ಲಿ ಮೊದಲ ಬಾರಿ ತೆಂಗು ರಫ್ತಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರ ರೈತ ಪರವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ
ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, ತೆಂಗು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ದೃಷ್ಟಿಯಿಂದ ರಫ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ತೆಂಗಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಲಿದೆ ಎಂದು ಭರವಸೆ ನೀಡಿದ್ದಾರೆ .
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ನಿರ್ಧಾರಗಳ ಮೂಲಕ ಸರ್ಕಾರ ರೈತ ಪರವಾಗಿದೆ ಎಂದು ಮೋದಿ ಸಾಬೀತು ಪಡಿಸಿದ್ದಾರೆ. ತೆಂಗು ಅಭಿವೃದ್ಧಿ ಮಂಡಳಿಗೆ ಈ ಮುಂಚೆ ಐಎಎಸ್ ಅಧಿಕಾರಿಗಳನ್ನು ನಿರ್ದೇಶಕರಾಗಿ ನೇಮಿಸಲಾಗುತ್ತಿತ್ತು. ಈಗ ತೆಂಗು ಬೆಳೆಯುವ ರೈತನನ್ನೆ ನಿರ್ದೇಶಕರನ್ನಾಗಿ ಮಾಡಲು ನಿರ್ಧರಿಸಿದೆ. ಜೊತೆಗೆ ಆರು ಸದಸ್ಯರ ಬದಲು ಎಂಟು ಸದಸ್ಯರಿಗೆ ಅವಕಾಶ ನೀಡಿದ್ದು ತೆಂಗು ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ. ಈ ನಿರ್ಧಾರದಿಂದ ಕರ್ನಾಟಕವೂ ಸೇರಿ ವಿಶೇಷವಾಗಿ ದಕ್ಷಿಣ ಭಾರತಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.