ಜನರು ನಿರ್ಲಕ್ಷ್ಯ ವಹಿಸಿದರೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ ಜಾರಿಯಾಗುತ್ತದೆ ; ಡಾ. ಕೆ. ಸುಧಾಕರ್

ಸಚಿವ ಡಾ. ಕೆ. ಸುಧಾಕರ್ ದಾವಣಗೆರೆಯ ಜಿಎಂಐಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾದ ಮೂರನೇ ಅಲೆ ಬರಲಿದೆ . ಮಕ್ಕಳಿಗೇ ಹೆಚ್ಚಾಗಿ ಕಾಡುತ್ತೆ ಎಂಬುದು ಅವೈಜ್ಞಾನಿಕವಾಗಿದೆ. ಮುಂದಿನ ಅಲೆಯಲ್ಲಿ ಮಕ್ಕಳಲ್ಲಿ ಕೊರೊನಾ ಸೋಂಕು ಕಂಡು ಬಂದರೂ ಅದು ಗಂಭೀರ ಪರಿಣಾಮ ಬೀರುವುದಿಲ್ಲವೆಂದು ಪರಿಣಿತರು ಹಾಗೂ ತಜ್ಞರು ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಕೋವಿಡ್ ಮೂರನೇ ಅಲೆ ಬರಬೇಕು ಎಂದೇನಿಲ್ಲ. ನಾವು ಯಾವ ರೀತಿ ಇರುತ್ತೇವೆಯೋ ಆ ರೀತಿಯಲ್ಲಿ ಕೋವಿಡ್ ನಿಗ್ರಹ ಆಗುತ್ತದೆ. ಸಾಮಾಜಿಕ ಅಂತರ, ಮಾಸ್ಕ್‌ನಂಥ ಸುರಕ್ಷತಾ ಕ್ರಮಗಳೊಂದಿಗೆ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಎಚ್ಚರಿಕೆ ವಹಿಸಬೇಕು ಎಂದರು. ರಾಜ್ಯದಲ್ಲಿ ಇದುವರೆಗೆ ಎರಡೂವರೆ ಕೋಟಿ ಕೊವಿಡ್ ಲಸಿಕೆ ನೀಡಿದ್ದೇವೆ. ಆಗಸ್ಟ್ ತಿಂಗಳಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಲಸಿಕೆ ಬರಲಿದ್ದು, ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡುವ ಯೋಜನೆ ಇದೆ ಎಂದರು.
ಪ್ರಸ್ತುತ ರಾಜ್ಯದ ಪ್ರವಾಸಿತಾಣಗಳಲ್ಲಿ ಜನಸಂದಣಿ ಸ್ವಲ್ಪ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಜನರು ತಾವಾಗಿಯೇ ತಿಳಿದು ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸರ್ಕಾರ ಈ ಬಗ್ಗೆ ಬಿಗಿ ಕ್ರಮವಹಿಸಬೇಕಾಗುತ್ತದೆ. ಆಗ ಜನಜೀವನ ಅಸ್ತವ್ಯವಸ್ಥವಾಗುತ್ತದೆ. 10 ಲಕ್ಷ ಜನಸಂಖ್ಯೆಗೆ 50 ಕ್ಕಿಂತ ಹೆಚ್ಚು ಪ್ರಕರಣಗಳು ಬಾರದಂದಂತೆ ಎಚ್ಚರಿಕೆವಹಿಸಬೇಕಾಗಿದೆ ಎಂದರು.
ಈಗ ಕೇರಳದಲ್ಲಿ ದಿನಕ್ಕೆ ಹದಿನೈದು ಸಾವಿರ ಕೋವಿಡ್ ಪ್ರಕರಣಗಳು ದಿನಕ್ಕೆ ವರದಿಯಾಗುತ್ತಿವೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿಯನ್ನು ರಾಜ್ಯ ಹಂಚಿಕೊಂಡಿರುವ ಕಾರಣ ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ. ಹಿಂದಿನ ಎರಡೂ ಅಲೆ ಅಲ್ಲಿ ಜಾಸ್ತಿಯಾದ ಕಾರಣ ರಾಜ್ಯದಲ್ಲೂ ಜಾಸ್ತಿಯಾಗಿತ್ತು. ಇದು ಮರುಕಳಿಸಬಾರದು ಎಂದರೆ ನಾವೆಲ್ಲರೂ ಎಚ್ಚರಿಕೆ ವಹಿಸಲೇಬೇಕು. ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕಿನ ಪ್ರಮಾಣ ಶೇಕಡಾ 1.5 ಇದೆ. ಆದರೂ ಸರ್ಕಾರ ಕೊರೋನಾ ಪರೀಕ್ಷೆಯನ್ನು ಕಡಿಮೆ ಮಾಡಿಲ್ಲ. ಯಾರೂ ಕೂಡ ಮೈಮರೆಯಬಾರದು. ಐಸಿಎಂಆರ್, ಏಮ್ಸ್ ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದು ಈಗಿರುವ ಕ್ರಮಗಳನ್ನು ಮುಂದುವರಿಸುವಂತೆ ಹೇಳಿದ್ದಾರೆ. ಶೇಕಡಾ 60 ರಿಂದ 70ರಷ್ಟು ಜನರಿಗೆ ಲಸಿಕೆ ನೀಡುವವರೆಗೂ ಎಲ್ಲರೂ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು.