
ಪ್ರಬಲ ಸೌರ ಚಂಡಮಾರುತವೊಂದು ಭೂಮಿಯತ್ತ ಹೊರಟಿದ್ದು, ಇಂದು 16 ಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯ ಆಯಸ್ಕಾಂತೀಯ ಕಕ್ಷೆಯತ್ತ ಸಮೀಪಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಸೂರ್ಯನ ವಾತಾವರಣದಲ್ಲಿ ಉಂಟಾಗಿರುವ ಈ ಬಿರುಗಾಳಿ ಸೂರ್ಯನ ಆಯಸ್ಕಾಂತೀಯ ಪ್ರಭಾವ ಇರುವ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಾಸಾ ಹೇಳಿದೆ. ಸೌರ ಬಿರುಗಾಳಿಯು ಭೂಮಿಯ ಹೊರಗಿನ ವಾತಾವರಣ ಬಿಸಿ ಮಾಡಬಹುದು. ಇದು ಉಪಗ್ರಹಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ತೊಂದರೆಗೆ ಕಾರಣವಾಗಬಹುದು. ವಿದ್ಯುತ್ ಲೈನ್‌ಗಳಲ್ಲಿ ಪ್ರವಾಹವು ಅಧಿಕವಾಗಿರಬಹುದು, ಇದು ಟ್ರಾನ್ಸ್‌ಫಾರ್ಮರ್‌ಗಳನ್ನು ಸಹ ಸ್ಫೋಟಿಸುತ್ತದೆ ಎಂದು ನಾಸಾ ಹೇಳಿದೆ. ಭೂಮಿಯ ಜೊತೆಗಿನ ಈ ಘರ್ಷಣೆಯಿಂದ ಸುಂದರವಾದ ಬೆಳಕು ಹೊರಹೊಮ್ಮಲಿದೆ. ಸೌರ ಚಂಡಮಾರುತದಿಂದಾಗಿ, ಉತ್ತರ ಅಥವಾ ದಕ್ಷಿಣ ಧ್ರುವದಲ್ಲಿ ವಾಸಿಸುವ ಜನರಿಗೆ ಸುಂದರವಾದ ಆಕಾಶದ ಬೆಳಕಿನ ನೋಟ ಕಾಣಬಹುದು. ಈ ಪ್ರದೇಶಗಳಿಗೆ ಹತ್ತಿರ ವಾಸಿಸುವ ಜನರು ರಾತ್ರಿಯಲ್ಲಿ ಸುಂದರವಾದ ಬೆಳಕಿನ ನೋಡ ಕಾಣಬಹುದಾಗಿದೆ.
ಈ ಸೌರ ಬಿರುಗಾಳಿಯು ಕೆಲವು ನಿಮಿಷಗಳಿಂದ ಕೆಲ ಗಂಟೆಗಳವರೆಗೆ ಇರುತ್ತದೆ. ಇದರಿಂದ ಮೊಬೈಲ್ ನೆಟ್‌ವರ್ಕ್, ಸ್ಯಾಟಿಲೈಟ್ ಟಿವಿ ಮತ್ತು ಜಿಪಿಎಸ್ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸೌರ ಜ್ವಾಲೆಗಳ ಕಾರಣದಿಂದ ವಿದ್ಯುತ್ ವ್ಯವಸ್ಥೆಯಲ್ಲೂ ವ್ಯತ್ಯಯಗಳಾಗಬಹುದಾಗಿದೆ.