ಕರಾವಳಿ

ಗ್ರಾಮ ಪಂಚಾಯತ್ ನಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲು ಸರಕಾರದ ನಿರ್ಧಾರ | ಜಿಲ್ಲೆಯ 22 ಗ್ರಾ.ಪಂ.ನಲ್ಲಿ ಮೊದಲ ಹಂತದಲ್ಲಿ ಅನುಷ್ಠಾನ

ಮಂಗಳೂರು : ಆಧಾರ್‌ ತಿದ್ದುಪಡಿ ಯೋಜನೆಯನ್ನು ಮತ್ತೊಮ್ಮೆ ಹಂತ ಹಂತವಾಗಿ ಎಲ್ಲಾ ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಕರ್ನಾಟಕದಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಪ್ರತೀ ಜಿಲ್ಲಾ ಪಂಚಾಯತ್ ನ 22 ಗ್ರಾಮ ಪಂಚಾಯತ್ ಗಳಲ್ಲಿ ಆಧಾರ್‌ ನೋಂದಣಿ ಕೇಂದ್ರ ಸ್ಥಾಪಿಸಲು ಸರಕಾರ ತೀರ್ಮಾನಿಸಿದೆ.

ಇದರ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 22 ಗ್ರಾ. ಪಂ.ಗಳಲ್ಲಿ ನೋಂದಣಿ ಕೇಂದ್ರ ಆರಂಭವಾಗಲಿದೆ. ಯಾವೆಲ್ಲ ಗ್ರಾಮ ಪಂಚಾಯತ್‌ ಎಂಬುದು ಇನ್ನು ಅಂತಿಮಗೊಳಿಸಬೇಕಷ್ಟೇ. ಆಧಾರ್‌ ನೋಂದಣಿಗೆ ಸರಕಾರದ ಇ-ಆಡಳಿತ ಇಲಾಖೆ 2,000 ಟ್ಯಾಬ್ಲೆಟ್‌ ಹಾಗೂ ಸಿಂಗಲ್‌ ಫಿಂಗರ್‌ ಪ್ರಿಂಟ್‌ ದೃಢೀಕರಣ ಉಪಕರಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಗೆ ನೀಡಲಿದೆ.


ಇಲಾಖೆಯು 28 ಜಿ. ಪಂ.ನ ತಲಾ 22 ಗ್ರಾ.ಪಂ.ಗೆ ಇದನ್ನು ನೀಡಲಿದೆ. ಜುಲೈ 19 ರಂದು 22 ಗ್ರಾ.ಪಂ.ಗಳ ಪಿಡಿಒ ಹಾಗೂ ಗ್ರಾ.ಪಂ. ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಆಧಾರ್‌ ಸಮಾಲೋಚಕರು ತರಬೇತಿ ನೀಡಲಿದ್ದಾರೆ. ಆಧಾರ್‌ ಕಾರ್ಡ್‌ ತಿದ್ದುಪಡಿಯನ್ನು ಜನಸ್ನೇಹಿಯಾಗಿ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾ.ಪಂ.ಗಳಲ್ಲಿ ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ರಚಿಸಲಾಗಿತ್ತು.

ಕೆಲವು ತಿಂಗಳು ಯಶಸ್ವಿಯಾಗಿದ್ದರೂ ಸರ್ವರ್, ದಾಖಲೆ ಸಮಸ್ಯೆಗಳಿಂದಾಗಿ ಈ ಸೇವೆ ಸ್ಥಗಿತಗೊಂಡಿತ್ತು. ಮೊಬೈಲ್‌ ನಂಬರ್‌ ಅಪ್‌ಡೇಟ್‌, ಇ ಮೇಲ್‌ ಐಡಿ ದಾಖಲಾತಿಗೆ ಅವಕಾಶವಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆಧಾರ್‌ ನೋಂದಣಿ ಸಹ ಮಾಡಬಹುದು. ಇದರ ಜತೆ ಹೆಸರು, ವಿಳಾಸ, ಜನ್ಮದಿನಾಂಕ ಬದಲಾವಣೆ ಸೇರಿದಂತೆ ಆಧಾರ್‌ನಲ್ಲಿ ಇತರ ತಿದ್ದುಪಡಿ ಮಾಡಲು ಕೂಡ ಅವಕಾಶ ಸಿಗುವ ಸಾಧ್ಯತೆಯಿದೆ.

ಕೋವಿಡ್ ಲಸಿಕೆ ಪಡೆಯಲು ನೊಂದಣೆ ಮಾಡಲು ಆಧಾರ್ ಗೆ ಮೊಬೈಲ್ ನಂಬರ್ ಜೋಡಣೆ ಅಗತ್ಯ. ಈ ನಿಟ್ಟಿನಲ್ಲಿ ಗ್ರಾ.ಪಂ.ನಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಸ್ಥಾಪನೆಗೆ ಸರಕಾರ ಮುಂದಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಸಿ.ಇ.ಒ ಡಾ| ಕುಮಾರ್‌ ಮಾತನಾಡಿ, ಮೊದಲ ಹಂತದಲ್ಲಿ ಜಿಲ್ಲೆಯ 22 ಗ್ರಾ.ಪಂ.ಗಳಲ್ಲಿ ಆಧಾರ್‌ ನೋಂದಣಿ ಕೇಂದ್ರ ಸ್ಥಾಪನೆಗೆ ಆವಶ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಯಾವ ಗ್ರಾ.ಪಂ.ನಲ್ಲಿ ತಿದ್ದುಪಡಿ ಕೇಂದ್ರ ತೆರೆಯಬೇಕು ಎಂದು ಕೆಲವೇ ದಿನಗಳಲ್ಲಿ ತೀರ್ಮಾನಿಸಲಾಗುತ್ತದೆ. ಆಯ್ಕೆಯಾದ ಗ್ರಾ.ಪಂ.ನಲ್ಲಿ ಸಿಬಂದಿಗೆ ತರಬೇತಿ ನೀಡಿ ತಿಂಗಳಾಂತ್ಯಕ್ಕೆ ಕೇಂದ್ರ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು.

ಆ ಬಳಿಕ ಎಲ್ಲ ಗ್ರಾ.ಪಂ.ಗಳಲ್ಲಿಯೂ ಕೇಂದ್ರ ಸ್ಥಾಪನೆಗೆ ಸರಕಾರ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!