ಕೊಠಡಿ ಬಾಗಿಲು ಹಾಕಿಕೊಂಡು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿಯ ಹಾರೋದ್ದು ಎಂಬಲ್ಲಿ ಜು.13 ರಂದು ನಡೆದಿದೆ.
ಮೃತ ಯುವಕ ಕೊಕ್ರಾಡಿ ಗ್ರಾಮದ ಜಂತಿಗೋಳಿ ಸಮೀಪ ಹಾರೋದ್ದು ನಿವಾಸಿ ರತ್ನಾಕರ ಮತ್ತು ರತ್ನಾ ದಂಪತಿ ಪುತ್ರ ರಕ್ಷಿತ್. ಈತ ಉಜಿರೆಯ ಖಾಸಗಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.
ಜು.13 ರಂದು ಮೃತ ಯುವಕ ರಕ್ಷಿತ್‌ರವರು ಮನೆಯ ಕೋಣೆಯೊಂದರಲ್ಲಿ ತಮ್ಮ ಮೊಬೈಲ್‌ನಲ್ಲಿ ಆನ್‌ಲೈನ್ ತರಗತಿ ಆಲಿಸುತ್ತಿದ್ದರೆನ್ನಲಾಗಿದೆ. ಬಳಿಕ ಮಧ್ಯಾಹ್ನದ ವೇಳೆ ಯುವಕನ ತಾಯಿ ಊಟ ಮಾಡಲು ಕೋಣೆಯ ಬಾಗಿಲು ಬಡಿದು ಮಗನನ್ನು ಕರೆದಿದ್ದರು. ಆದರೆ ತಾಯಿಯ ಕರೆಗೆ ಮಗ ಪ್ರತಿಕ್ರಿಯಿಸಲಿಲ್ಲ. ಇದನ್ನು ಗಮನಿಸಿದ ತಾಯಿ ಆತನ ಮೊಬೈಲ್‌ಗೆ ಕರೆ ಮಾಡಿದ ವೇಳೆ ಫೋನ್ ಸ್ವಿಚ್ ಆಫ್ ಆಗಿತ್ತು. ಕೂಡಲೇ ಕೋಣೆಯ ಕಿಟಕಿಯನ್ನು ತೆರೆದು ನೋಡಿದಾಗ ರಕ್ಷಿತ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಯುವಕನನ್ನು ತಕ್ಷಣವೇ ನಾರಾವಿಯ ಆಸ್ಪತ್ರೆಗೆ ಸಾಗಿಸಿ, ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲೆ ಯುವಕ ಮೃತಪಟ್ಟಿರುವದನ್ನು ವೈದ್ಯರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.