ದ.ಕ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ , ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ !

ಮಂಗಳೂರು ಜುಲೈ 18: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದ್ದು ನದಿ, ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶದ ಅಡಿಕೆ ತೋಟಗಳು ಜಲಾವೃತವಾಗಿದ್ದು, ಜಿಲ್ಲೆಯಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.
ಇನ್ನು ಭಾರೀ ಮಳೆಯ ನಡುವೆಯೂ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತ ಜನ ಸಾಗರವೇ ಸೇರಿದೆ. ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳ ಭಕ್ತರು ಆಗಮಿಸಿದ್ದು, ಮಳೆಯನ್ನೂ ಲೆಕ್ಕಿಸದೇ ದೇವಸ್ಥಾನದತ್ತ ಭಕ್ತರ ದಂಡೇ ಹರಿದು ಬರುತ್ತಿದೆ.
ವೀಕೆಂಡ್ ಆಗಿರುವ ಹಿನ್ನಲೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ಕ್ಷೇತ್ರದತ್ತ ಆಗಮಿಸಿದ್ದಾರೆ. ಕಳೆದ ನಾಲ್ಕುದಿನಗಳಿಂದ ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಾಗುತ್ತಿದ್ದು,ಜೀವ ನದಿ ನೇತ್ರಾವತಿ ಮೈದುಂಬಿ ಹರಿಯುತ್ತಿದೆ..
ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಘಟ್ಟ ಪ್ರದೇಶ ಮತ್ತು ಕುಮಾರಧಾರ ಪರ್ವತಗಳಿಂದ ಕುಮಾರಾಧಾರೆಗೆ ನೀರು ಹರಿದು ಬರುತ್ತಿದೆ.
ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ಕುಮಾರಧಾರ ಹರಿವು ಹೆಚ್ಚಳವಾಗಿದೆ. ಸದ್ಯ ಸಂಪೂರ್ಣ ಮುಳುಗಡೆಯಾಗಿರುವ ಕುಮಾರಧಾರ ಸ್ನಾನ ಘಟ್ಟದಲ್ಲಿ ಭಕ್ತರು ನದಿಗಿಳಿಯದೇ ತಲೆಗೆ ನೀರು ಚಿಮುಕಿಸಿ ತೆರಳುತ್ತಿದ್ದಾರೆ. ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾಧಿಗಳಿಗೆ ಸೂಚನೆ ನೀಡಲಾಗಿದ್ದು,
ಮುನ್ನೆಚ್ಚರಿಕೆ ಕ್ರಮವಾಗಿ ನದಿ ಬಳಿ ಜಿಲ್ಲಾಡಳಿತ ರಬ್ಬರ್ ಬೋಟ್ ಸನ್ನದ್ದವಾಗಿ ಇರಿಸಿದೆ.