
ಬೆಂಗಳೂರು : ಜುಲೈ ೨೧ ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗಿನಿಂದ ಕೂಡಿದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಗುಡುಗಿನಿಂದ ಕೂಡಿದ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಜುಲೈ ೧೮ ರಿಂದ ೨೧ ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ ೧೮ ಮತ್ತು ೧೯ ರಂದು ಆರೆಂಜ್ ಅಲರ್ಟ್ ಹಾಗೂ ಜುಲೈ ೨೦ ಮತ್ತು ೨೧ ರಂದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ಜುಲೈ ೧೯ ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಗೆ ತಿಳಿಸಿದೆ.
ಶನಿವಾರ ನೈರುತ್ಯ ಮುಂಗಾರು ರಾಜ್ಯದ ಉತ್ತರ ಒಳನಾಡಿನಲ್ಲಿ ಚುರುಕು ಹಾಗೂ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿ, ಉತ್ತರ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ವ್ಯಾಪಕ ಮಳೆಯಾಗಿದೆ. ಉತ್ತರ ಕನ್ನಡದ ಗೋಕರ್ಣದಲ್ಲಿ ೧೧ ಸೆಂ.ಮೀ, ಆಗುಂಬೆಯಲ್ಲಿ ೧೦ ಸೆಂ.ಮೀ, ಮಂಕಿ, ಕಾರವಾರ, ಬಸಗೋಡಿನಲ್ಲಿ ತಲಾ ೯ ಸೆಂ.ಮೀ, ಉತ್ತರ ಕನ್ನಡದ ಬೇಲಿಕೇರಿಯಲ್ಲಿ ೮ ಸೆಂ.ಮೀ. ಮಳೆಯಾಗಿದೆ. ಉಳಿದಂತೆ, ಮಂಗಳೂರು, ಕೋಟ, ಗಾಣಗಾಪುರದಲ್ಲಿ ತಲಾ ೬ ಸೆಂ.ಮೀ, ಸುಬ್ರಮಣ್ಯ, ಕಾರ್ಕಳ, ಕೊಲ್ಲೂರು, ಕುಂದಾಪುರ, ಶಿರಾಲಿ, ಹೊನ್ನಾವರ, ಕಲಬುರ್ಗಿಯ ಗುಂಡುಗುರ್ತ್ನಲ್ಲಿ ತಲಾ 5 ಸೆಂ.ಮೀ, ಭಟ್ಕಳ, ಕದ್ರಾ, ಮುಲ್ಕಿ, ಉಡುಪಿಯ ಸಿದ್ದಾಪುರ, ಯಾದಗಿರಿಯ ಸೈದಾಪುರ, ಲಿಂಗನಮಕ್ಕಿ, ಸಾಗರ, ತಾಳಗುಪ್ಪದಲ್ಲಿ ತಲಾ 4 ಸೆಂಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದ್ದಾರೆ .