55 ವರ್ಷದ ಕೆಎಸ್‌ಆರ್‌ಪಿ ಸಿಬ್ಬಂದಿ ಇಂದು SSLC ಪರೀಕ್ಷೆ ಬರೆದರು !

ಕೋಲಾರ, ಜುಲೈ 19: ಕೊರೊನಾ ಸೋಂಕಿನ ಭೀತಿ ನಡುವೆ ಸೋಮವಾರದಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿವೆ. ಕೊರೊನಾ ಕಟ್ಟುನಿಟ್ಟಿನ ನಿಯಮಗಳ ಪಾಲನೆಯೊಂದಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಈ ನಡುವೆ ಕೋಲಾರದ ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 55 ವರ್ಷದ ಮಂಜುನಾಥ್ ಎಂಬುವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರು ಸಶಸ್ತ್ರ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್, ಕೋಲಾರ ನಗರದ ಕುರುಬರ ಪೇಟೆ ನಿವಾಸಿಯಾಗಿದ್ದಾರೆ. ಇವರಿಗೆ ಮಕ್ಕಳು, ಮೊಮ್ಮಕ್ಕಳಿದ್ದಾರೆ.
ಮಂಜುನಾಥ್ ಅವರು ಕೆಲಸಕ್ಕೆ ಸೇರಿದ್ದು 1993ರಲ್ಲಿ. ಆಗ ಈ ಕೆಲಸಕ್ಕೆ ನಾಲ್ಕನೇ ತರಗತಿ ವಿದ್ಯಾರ್ಹತೆ ಸಾಕಿತ್ತು. 1996ರಲ್ಲಿ ಪೊಲೀಸ್ ಪೇದೆಯಾಗಲು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತೀರ್ಣವಾಗುವುದನ್ನು ಕಡ್ಡಾಯಗೊಳಿಸಲಾಯಿತು. ಇದೇ ಕಾರಣ ಮಂಜುನಾಥ್ ಅವರ ಬಡ್ತಿಗೆ ತೊಡಕಾಗಿತ್ತು. ಬಡ್ತಿಗೆ ಹತ್ತನೇ ತರಗತಿ ವಿದ್ಯಾರ್ಹತೆ ಅವಶ್ಯವಾಗಿರುವ ಕಾರಣ ಈ ಬಾರಿ ಪರೀಕ್ಷೆ ಬರೆಯಲು ಮಂಜುನಾಥ್ ಮುಂದಾಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಾದರೆ ಅವರು ಮುಖ್ಯಪೇದೆಯಾಗಿ ಬಡ್ತಿ ಪಡೆಯಲಿದ್ದಾರೆ.
ಈ ಬಾರಿ ಜುಲೈ 19ರಂದು ಕೋರ್ ವಿಷಯಗಳಿಗೆ ಮತ್ತು 22ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿವೆ. 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.