ಕರಾವಳಿ

ತುಳು ಲಿಪಿ ಮಂದಾರ ಬಿಡುಗಡೆ ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್


ತುಳು ಭಾಷೆ – ತುಳು ಲಿಪಿ ಪುರಾತನ ಕಾಲಘಟ್ಟದಲ್ಲಿ ಉಪಯೋಗ ಆಗುತ್ತಿದ್ದುದಕ್ಕೆ ಪುರಾವೆಗಳಿವೆ

ತಾಳೆಗರಿ ಉಪಯೋಗಿಸುತ್ತಿದ್ದ ಕಾಲಘಟ್ಟದಲ್ಲಿ ತುಳು ಲಿಪಿ ಬಳಕೆಯಾಗುತ್ತಿತ್ತು. ಪುರಾತನವಾದ ಐತಿಹಾಸಿಕ ಹಿನ್ನೆಲೆಯಿರುವ ತುಳು ಭಾಷೆ, ತುಳು ಲಿಪಿ ಮಧ್ವಾಚಾರ್ಯರ ಕಾಲಘಟ್ಟದಲ್ಲಿಯೂ ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಅಷ್ಠಮಠಗಳಲ್ಲಿ ಪುರಾವೆಗಳಿವೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ದಿನಾಂಕ 19-07-2021 ರಂದು ಆಯೋಜಿಸಲಾದ “ತುಳು ಲಿಪಿ ಮಂದಾರ” ಬಿಡುಗಡೆ ಕಾರ್ಯಕ್ರಮದಲ್ಲಿ “ತುಳು ಲಿಪಿ ಮಂದಾರ” ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಾಂತ್ಯಗಳು ಬದಲಾದಂತೆ ಆಡಳಿತ ವ್ಯವಸ್ಥೆಗಳಿಂದಾಗಿ ತುಳು ಲಿಪಿ ಜನಮಾನಸದಿಂದ ದೂರವಾಗಿದೆ. ಪ್ರಸಕ್ತ ದಿನಗಳಲ್ಲಿ ತುಳು ಭಾಷೆ ತುಳು ಲಿಪಿಯ ಬಗ್ಗೆ ಯುವ ಸಮುದಾಯ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ವಿಧಾನ ಸಭಾ ಅಧಿವೇಶನದಲ್ಲಿ ಕರಾವಳಿ ಭಾಗದ ಶಾಸಕರಿಗೆ ತುಳುವಿನಲ್ಲೇ ಮಾತನಾಡಲು ಅವಕಾಶ ಕಲ್ಪಿಸಲು ಮನವಿ ಮಾಡಲಾಗಿತ್ತು. ಆದರೆ ಸದನದಲ್ಲಿ ದಾಖಲಾಗುವ ಮಾಹಿತಿಗಳನ್ನು ದಾಖಲು ಮಾಡುವವರಿಗೆ ತುಳು ಭಾಷೆಯ ಅರಿವಿನ ಕೊರತೆಯಿರುವುದರಿಂದ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಸಭಾಧ್ಯಕ್ಷರು ನೀಡಿರುತ್ತಾರೆ ಎಂದು ಹೇಳಿದ ಅವರು ತುಳು ಲಿಪಿ, ಭಾಷೆ ಬಗ್ಗೆ ಜೈ ತುಳುನಾಡು ಸಂಘಟನೆಯ ಈ ಪ್ರಯತ್ನ ಉತ್ತಮ ಬೆಳವಣಿಗೆ. ಜನಮಾನಸದಲ್ಲಿ ತುಳು ಲಿಪಿ ಮೂಡಿ ಬಂದು ಎಲ್ಲರೂ ಬಳಸಿಕೊಳ್ಳುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ತುಳು ಅಕಾಡೆಮಿಯ ಸದಸ್ಯರಾದ ಡಾll ಆಕಾಶ್ ರಾಜ್ ಜೈನ್, ತಾರಾ ಆಚಾರ್ಯ, ಜೈ ತುಳುನಾಡು ಸಂಘಟನೆಯ ಅಧ್ಯಕ್ಷರಾದ ಸುದರ್ಶನ್ ಸೂರತ್ಕಲ್, ಸದಸ್ಯರಾದ ಪ್ರಹ್ಲಾದ್ ಪಿ. ತಂತ್ರಿ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker