ಕರಾವಳಿ

ಸಾವಿನ ನಂತರವೂ ಸಾರ್ಥಕತೆ ಮೆರೆದ ಮಂಗಳೂರಿನ ಮಹಿಳೆ

ಮಂಗಳೂರು: ಮೆದುಳು ನಿಷ್ಕ್ರಿಯಗೊಂಡ ಮಹಿಳೆ ತನ್ನ ಅಂಗಾಂಗಗಳನ್ನು ಆರು ರೋಗಿಗಳಿಗೆ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ರಕ್ತದೊತ್ತಡ ಕಾಯಿಲೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಿನ್ನಿಗೋಳಿಯ ಮಹಿಳೆ ಲಿಂಡಾ ಶಾರೆನ್ ಡಿಸೋಜ (೪೧) ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಆಕೆಯ ಸಹೋದರರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ರವಿವಾರ ಸಂಜೆ ಈ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದೆ .

ಲಿಂಡಾ ಶರಾನ್ ಡಿಸೋಜ  ಅವರ ಹೃದಯ ಮತ್ತು ಶ್ವಾಸಕೋಶ ಚೆನ್ನೈನ ಎಂಜಿಎಂ ಆಸ್ಪತ್ರೆಗೆ,  ಲಿವರ್‌ ಬೆಂಗಳೂರಿನ ಆಸ್ಪತ್ರೆಗೆ ಎರಡು ಕಿಡ್ನಿಗಳ ಪೈಕಿ ಒಂದು ಮಣಿಪಾಲ ಆಸ್ಪತ್ರೆಗೆ ಹಾಗೂ ಇನ್ನೊಂದು ಕಿಡ್ನಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಹಾಗೂ ಭಾಗಶಃ ಚರ್ಮವನ್ನು ದೇರಳಕಟ್ಟೆಯ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಕಸಿ ಮಾಡಲು ದಾನ ಮಾಡಲಾಗಿದೆ.

ಭಾನುವಾರ ಸಂಜೆ ಆಂಬುಲೆನ್ಸ್‌ ಮೂಲಕ ಹೃದಯ, ಶ್ವಾಸಕೋಶ ಹಾಗೂ ಲಿವರ್‌ ಅನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು, ಬಳಿಕ ಅಲ್ಲಿಂದ ವಿಮಾನದ ಮೂಲಕ ಚೆನ್ನೈ ಹಾಗೂ ಬೆಂಗಳೂರಿಗೆ ಸಾಗಿಸಲಾಯಿತು. ಬಳಿಕ ಆಂಬುಲೆನ್ಸ್‌ಗೆ ಫಾದರ್‌ ಮುಲ್ಲರ್‌ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ಸಾಗಿಸಲು ಮಂಗಳೂರು ಪೊಲೀಸರು ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಮಾಡಿದರು.

‘ಲಿಂಡಾ ಶಾರೆನ್ ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ರಕ್ತದೊತ್ತಡ ಕಾಯಿಲೆ ಪ್ರಯುಕ್ತ ನಾಲ್ಕು ವರ್ಷಗಳ ಹಿಂದೆ ಕೆಲಸ ಬಿಟ್ಟು ಊರಿಗೆ ಬಂದು ಕಿನ್ನಿಗೋಳಿಯಲ್ಲಿ ತಾಯಿ ಜತೆ ವಾಸ್ತವ್ಯವಿದ್ದರು. ರಕ್ತದೊತ್ತಡ ಮತ್ತು ತಲೆ ನೋವು ತೀವ್ರವಾದ ಹಿನ್ನೆಲೆಯಲ್ಲಿ ಜು.೧೧ ರಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾಲ್ಕು ವರ್ಷಗಳಿಂದ ಆರೋಗ್ಯ ಸಲಹೆ ನೀಡುತ್ತಿದ್ದ ಡಾ.ವೆಂಕಟೇಶ್ ಎಂ. ಅವರಲ್ಲದೆ, ಡಾ.ರಾಘವೇಂದ್ರ, ಡಾ.ಜೋವರ್ ಲೋಬೊ, ಡಾ.ಮಂಜುನಾಥ್ ಜೆ. ಚಿಕಿತ್ಸೆ ನೀಡುತ್ತಿದ್ದರು. ಸಿ.ಟಿ. ಸ್ಕಾನ್ ಮಾಡಿದಾಗ ಲಿಂಡಾ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡು ಬಂದಿತ್ತು. ಅದರಿಂದಾಗಿ ಪ್ರಜ್ಞಾಹೀನರಾದ ಕಾರಣ ತೀವ್ರ ನಿಗಾ ಘಟಕದ ವೆಂಟಿಲೇಟರ್‌ನಲ್ಲಿ ದಾಖಲಿಸಲಾಗಿತ್ತು. ಶನಿವಾರ ಅವರ ಮೆದುಳು ನಿಷ್ಕ್ರಿಯವಾಯಿತು ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯ ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಲಿಂಡಾ ಅವರು ಬದುಕುಳಿಯುವುದು ಅಸಾಧ್ಯ ಎಂದು ಆಕೆಯ ಸಹೋದರರಾದ ಲ್ಯಾನ್ಸಿ ಪ್ರಕಾಶ್ ಡಿಸೋಜ ಮತ್ತು ಸಂತೋಷ್ ಡಿಸೋಜ ಅವರ ಗಮನಕ್ಕೆ ತಂದು ಆಕೆಯ ಅಂಗಾಂಗ ದಾನ ಮಾಡಬಹುದೇ ಎಂಬ ಕೋರಿಕೆಯನ್ನು ಮುಂದಿಟ್ಟಾಗ ಅದಕ್ಕವರು ಆಸಕ್ತಿ ತೋರಿದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಅಂಗಾಂಗ ದಾನ ನಿಯಂತ್ರಣ ಸಂಸ್ಥೆ ‘ಜೀವ ಸಾರ್ಥಕತೆ’ಯನ್ನು ಸಂಪರ್ಕಿಸಿ ಲಿಂಡಾ ಅವರ ಅಂಗಾಂಗಗಳ ದಾನಕ್ಕೆ ವ್ಯವಸ್ಥೆ ಮಾಡಲಾಯಿತು.

ಅಂಗಾಂಗಳನ್ನು ಕೊಂಡೊಯ್ಯಲು ಬೆಂಗಳೂರು ಮತ್ತು ಚೆನ್ನೈನ ಆಸ್ಪತ್ರೆಗಳಿಂದ ತಜ್ಞರ ತಂಡ ವಿಮಾನದಲ್ಲಿ ರವಿವಾರ ಬೆಳಗ್ಗೆ ಮಂಗಳೂರಿಗೆ ಆಗಮಿಸಿತ್ತು. ಮಧ್ಯಾಹ್ನ 12:30ರಿಂದ ಅಂಗಾಂಗಳನ್ನು ಬೇರ್ಪಡಿಸಿ, ವರ್ಗೀಕರಿಸುವ ಪ್ರಕ್ರಿಯೆ ಆರಂಭವಾಗಿ ಸಂಜೆ 5:30ರ ವೇಳೆಗೆ ಮುಕ್ತಾಯವಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!