ಕರಾವಳಿ
ಕಾಂಗ್ರೆಸ್ ಮುಖಂಡ : ಆಸ್ಕರ್ ಫೆರ್ನಾಂಡಿಸ್ ಯೋಗ ಮಾಡುವ ವೇಳೆ ಜಾರಿಬಿದ್ದು ಆಸ್ಪತ್ರೆಗೆ ದಾಖಲು

ಮಂಗಳೂರು: ರಾಜ್ಯ ಸಭಾ ಸದಸ್ಯ ಹಿರಿಯ ರಾಷ್ಟ್ರೀಯ ಕಾಂಗ್ರೆಸ್‌ನ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು ಯೋಗ ಮಾಡುತ್ತಿದ್ದ ವೇಳೆ ಜಾರಿ ಬಿದ್ದು, ಗಾಯಗೊಂಡ ಹಿನ್ನೆಲೆ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಭಾನುವಾರ ಬೆಳಗ್ಗೆ ಯೋಗ ಮಾಡುವ ಸಂದರ್ಭ ಆಸ್ಕರ್ ಫೆರ್ನಾಂಡಿಸ್ ಅವರು ನಿಯಂತ್ರಣ ತಪ್ಪಿ ಜಾರಿ ಬಿದ್ದಿದ್ದರು. ಯಾವುದೇ ಗಾಯವಾಗಿಲ್ಲವೆಂದು ಇದನ್ನು ನಿರ್ಲಕ್ಷಿಸಿದ್ದರು. ಅದೇ ದಿನ ಸಂಜೆ ಡಯಾಲಿಸಿಸ್ ಗೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು.
ಈ ಸಂದರ್ಭ ಪರೀಕ್ಷಿಸಿದಾಗ ತಲೆಯ ಒಳಭಾಗಕ್ಕೆ ಪೆಟ್ಟು ಬಿದ್ದಿದ್ದು, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.