ಪಿಯುಸಿ ಫಲಿತಾಂಶದಲ್ಲಿ ದ.ಕ ಜಿಲ್ಲೆ ಪ್ರಥಮ ಸ್ಥಾನ; ರಿಪೀಟರ್ಸ್ ಸೇರಿ ಎಲ್ಲಾ ವಿದ್ಯಾರ್ಥಿಗಳು ಪಾಸ್!!!

ಬೆಂಗಳೂರು: ಕೊರೊನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಎಸ್ಎಸ್ಎಲ್ಸಿ ಫಲಿತಾಂಶ ಮತ್ತು ಪ್ರಥಮ ಪಿಯುಸಿ ಫಲಿತಾಂಶವನ್ನು ಪರಿಗಣಿಸಿ ದ್ವಿತೀಯ ಪಿಯು ಫಲಿತಾಂಶವನ್ನು ನೀಡಲಾಗುತ್ತದೆ. ಗ್ರೇಡ್ ಬದಲಿಗೆ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡಲಾಗಿದೆ. ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುತ್ತಿರುವುದು ಇದೇ ಮೊದಲ ಬಾರಿ ಆಗಿದೆ.
ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವೊಬ್ಬ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಫಲಿತಾಂಶ ನೀಡಲಾಗಿದೆ ಎಂದು ಹೇಳಿದ್ದಾರೆ. ಎಸ್ಸೆಸ್ಸೆಲ್ಸಿ ಹಾಗೂ ಪ್ರಥಮ ಪಿಯುಸಿಯ ಅಂಕ ಆಧರಿಸಿ ದ್ವಿತೀಯ ಪಿಯುಸಿ ಕೃಪಾಂಕ ಪರಿಗಣನೆ ಮಾಡಲಾಗಿದೆ. ಅದರಂತೆ, 6,66,497 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹುಡುಗರು 3,35,138 ಹಾಗೂ ಹುಡುಗಿಯರು 3,31,359 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪಿಯುಸಿ ಫಲಿತಾಂಶದಲ್ಲಿ ದ.ಕ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡರೆ ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನ್ ಪಡೆದುಕೊಂಡಿದೆ. 600ಕ್ಕೆ 600 ಅಂಕ ಪಡೆದ ವಿದ್ಯಾರ್ಥಿಗಳು: ದಕ್ಷಿಣ ಕನ್ನಡ ಜಿಲ್ಲೆ 445, ಬೆಂಗಳೂರು ದಕ್ಷಿಣ 302, ಬೆಂಗಳೂರು ಉತ್ತರ 261, ಉಡುಪಿ 149, ಹಾಸನ 104 ವಿದ್ಯಾರ್ಥಿಗಳು.
ವಾಣಿಜ್ಯ ವಿಭಾಗ-2,51,686, ವಿಜ್ಞಾನ, 2,19,777, ಕಲಾ ವಿಭಾಗದಲ್ಲಿ 1,95,304 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಖ್ಯೆ 1,47,594 ಇದ್ದರೆ, ನಗರ ಪ್ರದೇಶದಲ್ಲಿ 5,18,903 ವಿದ್ಯಾರ್ಥಿಗಳಿದ್ದಾರೆ.