
ಶಿರಾಡಿ ಘಾಟ್ ನಲ್ಲಿ ಮಣ್ಣು ಕುಸಿತಗೊಂಡಿದ್ದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಇದರಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಚಾರ್ಮಾಡಿ ಘಾಟ್ ನಲ್ಲಿ ವಾಹನ ನಿಲುಗಡೆ ಸಂಪೂರ್ಣ ನಿಷೇಧ ಮಾಡಿ ಚಿಕ್ಕಮಗಳೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಲಾಕ್ಡೌನ್ ತೆರವಾದ ಬಳಿಕ ಜನ ಸಂಚಾರ ಹೆಚ್ಚಿದ್ದು, ಚಾರ್ಮಾಡಿ ಘಾಟ್ ನಲ್ಲಿರುವ ಜಲಪಾತವನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಅನೇಕರು ತಮ್ಮ ವಾಹನಗಳನ್ನು ರಸ್ತೆ ಬದಿಗಳಲ್ಲಿ ನಿಲ್ಲಿಸುತ್ತಿರುವುದರಿಂದ ಇತರ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಶಿರಾಡಿ ಘಾಟ್ ನಲ್ಲಿ ಸಂಚಾರ ಬಂದ್ ಆದ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರ ಹೆಚ್ಚಳವಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಚಾರ್ಮಾಡಿ ಘಾಟ್ ನಲ್ಲಿ ಇನ್ನು ಮುಂದೆ ವಾಹನ ನಿಲ್ಲಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಹಾಗೂ ಘಾಟ್ ನಲ್ಲಿ ಪ್ರವಾಸಿಗರ ವಾಹನದ ಮೇಲೆ ನಿಗಾ ವಹಿಸಲು ಹೈವೇ ಪೆಟ್ರೋಲ್ ನಿಯೋಜಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.