
ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತೀಯರಿಗೆ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಶನ್ (ಐಒಎ) ಭರ್ಜರಿ ನಗದು ಪುರಸ್ಕಾರ ಘೋಷಿಸಿದೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಬಂಗಾರದ ಮೆರಗು ತರುವವರಿಗೆ 75 ಲಕ್ಷ ರೂ. ಘೋಷಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುವ ಅಥ್ಲೀಟ್‌ಗಳಿಗೆ 75 ಲಕ್ಷ ರೂ. ನೀಡುವುದಾಗಿ ಐಒಎ ಗುರುವಾರ (ಜುಲೈ 22) ಘೋಷಿಸಿದೆ. ಅಂದರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್‌ನಿಂದ ನೀಡಲಾಗುವ 25 ಲಕ್ಷ ರೂ. ಹಣವಲ್ಲದೆ ಚಿನ್ನ ಗೆದ್ದರೆ 75 ಲಕ್ಷ ರೂ. ನೀಡಲಾಗುತ್ತದೆ.
ಐಒಎ ಸಲಹಾ ಸಮಿತಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದವರಿಗೆ 40 ಲಕ್ಷ ರೂ., ಕಂಚು ವಿಜೇತರಿಗೆ 25 ಲಕ್ಷ ರೂ. ನೀಡಬೇಕೆಂದು ಸೂಚಿಸಿದೆ. “ದೇಶವನ್ನು ಪ್ರತಿನಿಧಿಸುವ ಅಥ್ಲೀಟ್‌ಗಳಿಗೆ 1 ಲಕ್ಷ ರೂ. ನೀಡುವಂತೆಯೂ ಐಒಎ ಸಲಹಾ ಸಮಿತಿ ಶಿಫಾರಸು ಮಾಡಿದೆ,” ಎಂದು ಐಒಎ ಪ್ರಕಟಣೆ ತಿಳಿಸಿದೆ.
ಇದಲ್ಲದೆ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಶನ್‌ನಿಂದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ 25 ಲಕ್ಷ ರೂ., ಪದಕ ಗೆದ್ದವರಿಗೆ 30 ಲಕ್ಷ ರೂ. ಹೆಚ್ಚುವರಿ ನಗದು ನೀಡಬೇಕೆಂದು ಐಒಎ ಶಿಫಾರಸು ಮಾಡಿದೆ. ಜುಲೈ 23ರಿಂದ ಆಗಸ್ಟ್ 8ರ ವರಗೆ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಹಬ್ಬ ನಡೆಯಲಿದೆ.