ಮಂಗಳೂರು ಪೊಲೀಸ್ ಕಮಿಶನರೇಟ್ ನ ಶ್ವಾನದಳದ ಸುಧಾ ಅನಾರೋಗ್ಯದಿಂದ ಸಾವು

ಮಂಗಳೂರು : ಮಂಗಳೂರು ಪೊಲೀಸ್ ಕಮಿಶನರೇಟ್ ನ ಅಪರಾಧ ಪತ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಸುಧಾ ಕ್ಯಾನ್ಸರ್ ಗೆ ಬಲಿಯಾಗಿದ್ದು, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಲಾಯಿತು. 2011 ರ ಮಾರ್ಚ್ 15 ರಂದು ಜನಿಸಿದ್ದ ಸುಧಾ ಡೋಬರ್ಮನ್ ಪಿನ್ಷರ್ ತಳಿಯ ಶ್ವಾನವಾಗಿದ್ದು, 2012 ರ ಎಪ್ರಿಲ್ 2 ರಂದು ಸೂಕ್ತ ತರಬೇತಿಯೊಂದಿಗೆ ಮಂಗಳೂರು ಪೊಲೀಸ್ ಘಟಕದ ಶ್ವಾನದಳವನ್ನು ಸೇರಿತ್ತು. ಇಲಾಖೆಯಲ್ಲಿ ಸಂದೀಪ್ ಅವರು ಸುಧಾ ಶ್ವಾನದ ನಿರ್ವಾಹಕರಾಗಿದ್ದರು. ಮಂಗಳೂರು ನಗರ ಪೊಲೀಸರೊಂದಿಗೆ ಅಪರಾಧ ವಿಭಾಗದಲ್ಲಿ ಸುಮಾರು ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಸುಧಾ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ಸಾವನ್ನಪ್ಪಿದೆ. ಇದರಿಂದಾಗಿ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ.
ಹಲವಾರು ಅಪರಾಧ ಕೃತ್ಯಗಳಲ್ಲಿ, ಆರೋಪಿಗಳ ಪತ್ತೆಯಲ್ಲಿ ಸುಧಾ ಪ್ರಮುಖ ಪಾತ್ರವನ್ನು ವಹಿಸಿತ್ತು. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಮೊದಲಾದ ಹಿರಿಯ ಅಧಿಕಾರಿಗಳು ಮೃತ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಿ ಗೌರವಿಸಿದರು.