ಕರಾವಳಿ

ಉಡುಪಿ ಡಿ.ಸಿ ಸೂಚನೆ ಪೋಲಿಸರಿಗೆ : ಮಹಿಳೆಯರ ಮತ್ತು ಮಕ್ಕಳು ಕಾಣೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಪತ್ತೆಗೆ ಕ್ರಮ ವಹಿಸಬೇಕು :

ಉಡುಪಿ : ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿಯಲ್ಲಿ ಮಹಿಳೆ ಮತ್ತು ಮಕ್ಕಳು ಕಾಣೆಯಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರದಲ್ಲಿ ಅವರನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿವಿಧ ಕಾರಣಗಳಿಂದ ಕಾಣೆಯಾಗುವ ಮಹಿಳೆ ಮತ್ತು ಮಕ್ಕಳನ್ನು ಶೀಘ್ರದಲ್ಲಿ ಪತ್ತೆ ಹಚ್ಚದಿದ್ದಲ್ಲಿ ಅವರು ಅಪಾಯಕಾರಿ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳಿದ್ದು, ತನಿಖಾಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಅವರ ರಕ್ಷಣೆ ಮಾಡಬೇಕು.

ಇಂತಹ ಪ್ರಕರಣಗಳ ಪತ್ತೆಗೆ ಹೆಚ್ಚಿನ ಪೊಲೀಸ್‍ ಸಿಬ್ಬಂದಿಗಳನ್ನು ವಿಶೇಷ ಕರ್ತವ್ಯದಲ್ಲಿ ನಿಯೋಜಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗುವ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಕುರಿತಂತೆ ಗಮನಹರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಉಡುಪಿ ಸಾಂತ್ವನ ಕೇಂದ್ರ ಸ್ಥಗಿತಗೊಂಡಿದ್ದು, ಉಡುಪಿಗೆ ಸಂಬಂದಪಟ್ಟ ನೊಂದ ಮಹಿಳೆಯರು ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಅಗತ್ಯ ನೆರವು ಪಡೆಯುವಂತೆ ತಿಳಿಸಿದರು.

ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ತೊಂದರೆಯಾಗದ ಬಗ್ಗೆ ಖಾಸಗಿ ಸೇರಿದಂತೆ ಎಲ್ಲಾ ಕಚೇರಿಗಳಲ್ಲಿ ಅಂತರಿಕ ದೂರು ಸಮಿತಿ ರಚನೆಯಾಗಿರುವ ಬಗ್ಗೆ ಪರಿಶೀಲಿಸಿ, ನಿಯಮಿತವಾಗಿ ಸಮಿತಿಯ ಸಭೆ ನಡೆಸಿ ವರದಿ ಪಡೆಯಿತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸೂಚಿಸಿದರು. ಜಿಲ್ಲೆಯ ವಲಸೆ ಕಾರ್ಮಿಕರಲ್ಲಿ ಬಾಲ್ಯ ವಿವಾಹ ನಡೆಯುವ ಸಾಧ್ಯತೆಗಳಿದ್ದು ಈ ಬಗ್ಗೆ ನಿಗಾ ವಹಿಸಿ, ಅವರು ವಾಸಿಸುವ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ.

ಶಾಲಾ ಮಕ್ಕಳು 10 ದಿನಗಳಿಗಿಂತ ಹೆಚ್ಚು ಗೈರು ಹಾಜರಾದಲ್ಲಿ , ಅಂತಹ ಮಕ್ಕಳ ಮಾಹಿತಿಯನ್ನು ಶಾಲೆಗಳಿಂದ ಪಡೆದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ಮೂಲ ಜಿಲ್ಲೆ, ವಿಳಾಸ ಕುರಿತಾದ ಅವರ ಸಮರ್ಪಕ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸಿ ಎಂದರು.

ಕುಂದಾಪುರ ಮಹಿಳಾ ಸಾಂತ್ವನ ಕೇಂದ್ರದಲ್ಲಿ 2021 ರ ಜೂನ್ ಅಂತ್ಯದವರೆಗೆ ಬಾಕಿ ಇದ್ದ 63 ಪ್ರಕರಣಗಳಲ್ಲಿ 24 ಪ್ರಕರಣ ಇತ್ಯರ್ಥಗೊಂಡಿದ್ದು, 16 ಸಾಂತ್ವನ ಕೇಂದ್ರದಲ್ಲಿ ಮತ್ತು 23 ನ್ಯಾಯಾಲಯದಲ್ಲಿ ಬಾಕಿ ಇವೆ. ಕಾರ್ಕಳ ಮಹಿಳಾ ಸಾಂತ್ವನ ಕೇಂದ್ರದಲ್ಲಿ 23 ಪ್ರಕರಣಗಳಲ್ಲಿ 13 ಪ್ರಕರಣ ಇತ್ಯರ್ಥಗೊಂಡಿದ್ದು, 10 ಸಾಂತ್ವನ ಕೇಂದ್ರದಲ್ಲಿ ಬಾಕಿ ಇದೆ. ವರದಕ್ಷಿಣೆ ನಿಷೇದ ಕಾಯ್ದೆಯಡಿ ಡಿಸೆಂಬರ್ ವರೆಗೆ ಬಾಕಿ ಇದ್ದ 47 ಪ್ರಕರಣಗಳಲ್ಲಿ, 29 ಇತ್ಯರ್ಥಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಮಾಹಿತಿ ನೀಡಿದರು.

ಉಡುಪಿಯಲ್ಲಿ ಕೊರೋನಾದ 3ನೇ ಅಲೆಯು ಮಕ್ಕಳನ್ನು ಬಾಧಿಸಬಹುದಾದ ಹಿನ್ನೆಲೆಯಲ್ಲಿ, ಮಕ್ಕಳೊಂದಿಗೆ ಮಕ್ಕಳ ಸ್ನೇಹಿಯಾಗಿ ಬೆರೆತು, ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ, ಕೋವಿಡ್ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ , ಮಕ್ಕಳ ಸಮಾಲೋಚಕರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಹ ಮಕ್ಕಳ ಸಮಾಲೋಚಕರನ್ನು ನೇಮಿಸಿ, ಮಕ್ಕಳ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವ ಎಂ.ಎಸ್.ಡಬ್ಯೂ ಮತ್ತು ಮನ:ಶಾಸ್ತ್ರದ ವಿದ್ಯಾರ್ಥಿಗಳಿಗೆ,ಕೋವಿಡ್ ಬಾಧಿತರಾದ ಮಕ್ಕಳೊಂದಿಗೆ ಬೆರೆತು, ಮಕ್ಕಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮತ್ತು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಮನವೊಲಿಸುವ ವಿಧಾನಗಳ ಬಗ್ಗೆ ಸೂಕ್ತ ತರಬೇತಿ ನೀಡಿ, ಅವರನ್ನು ಕೋವಿಡ್ ಕಾಲ್ ಸೆಂಟರ್ ಹಾಗೂ ಟೆಲಿ ಕೌನ್ಸಿಲಿಂಗ್ ಸೇವೆಗಳಿಗೆ ಸಹ ನಿಯೋಜಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಕ್ಕಳ ಸಹಾಯವಾಣಿ ಸಂಖ್ಯೆ 1098 ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಅರಿವು ಮೂಡಿಸಿ. ಪಿಡಿಓಗಳು, ಆಶಾ ಕಾರ್ಯಕತೆಯರು, ಹಿರಿಯ ಆರೋಗ್ಯ ಸಹಾಯಕಿಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ. ಶಾಲೆಗಳು ಆರಂಭವಾದ ಕೂಡಲೇ ಶಾಲಾ ಮುಖ್ಯೋಪಧ್ಯಾಯರಿಗೆ ಸಹ ತರಬೇತಿ ಆಯೋಜಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ವಿವಿಧ ಜಿಲ್ಲಾ ಮಟ್ದದ ಅಧಿಕಾರಿಗಳು ಹಾಗೂ ಮಹಿಳೆಯರ ಅಭಿವೃಧ್ದಿಗಾಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back to top button
error: Content is protected !!

Adblock Detected

Please consider supporting us by disabling your ad blocker