ಕಾರು ಅಪಘಾತ: ಖ್ಯಾತ ನಟಿ ಯಶಿಕಾ ಆನಂದ್’ಗೆ ಗಾಯ, ಸ್ನೇಹಿತೆ ಸಾವು

ಚೆನ್ನೈ: ಖ್ಯಾತ ನಟಿ ಯಶಿಕಾ ಆನಂದ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಸ್ನೇಹಿತೆ ಸಾವನ್ನಪ್ಪಿದ್ದಾರೆ.
ಚೆನ್ನೈನಲ್ಲಿ ಭಾನುವಾರ ಈ ದುರ್ಘಟನೆ ನಡೆದಿದೆ. ತಮಿಳು, ತೆಲುಗು ಸಿನಿಮಾದಲ್ಲಿ ನಟಿಸಿದ ನಟಿ ಯಶಿಕಾ ಆನಂದ್ ಅವರು ತಮ್ಮ ಸ್ನೇಹಿತರ ಜತೆ ಮಹಾಬಲಿಪುರಂನಿಂದ ಚೆನ್ನೈಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಯಶಿಕಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಜತೆ ಪ್ರಯಾಣಿಸುತ್ತಿದ್ದ ಸ್ನೇಹಿತೆ, ಅಮೆರಿಕದಲ್ಲಿ ಸಾಫ್ಟ್’ವೇರ್ ಎಂಜಿನಿಯರ್ ಆಗಿದ್ದ ವಲ್ಲಿಚೆಟ್ಟಿ ಭವಾನಿ (28) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಸ್ಟ್ ಕೋಸ್ಟ್ ರೋಡ್‍ನಲ್ಲಿ ಶನಿವಾರ (ಜು.24) ರಾತ್ರಿ 11.45ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದಿದೆ. ವಿಜಯ್ ದೇವರಕೊಂಡ ನಟನೆಯ ನೋಟಾ, 2019ರಲ್ಲಿ ಬಂದ ಜೋಂಬಿ ಮುಂತಾದ ಸಿನಿಮಾಗಳಲ್ಲಿ ಯಶಿಕಾ ಆನಂದ್ ಅಭಿನಯಿಸಿದ್ದಾರೆ.