
ಶಿರಡಿ ಘಾಟ್ ನಲ್ಲಿ ಹೆದ್ದಾರಿ ಕುಸಿತದ ಬಳಿಕ ರಾಜ್ಯದ ಎರಡು ಪ್ರಮುಖ ನಗರಗಳಾದ ಮಂಗಳೂರು ಹಾಗೂ ಬೆಂಗಳೂರನ್ನು ಸಂಪರ್ಕಿಸುವ ಬದಲಿ ರಸ್ತೆಯಾಗಿ ಬಳಕೆಯಾಗುತ್ತಿರುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಭಾರೀ ಟ್ರಾಫಿಕ್ ಜಾಮ್ ಕಂಡು ಬಂದಿದೆ
ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಮಲಯ ಮಾರುತದಿಂದ ಪೂರ್ತಿ ಚಾರ್ಮಾಡಿ ಘಾಟ್ ರಸ್ತೆಯ ಎಲ್ಲ ತಿರುವುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಹನಗಳು ಟ್ರಾಫಿಕ್ ಜಾಮ್ ಸಿಕ್ಕಿ ಹಾಕಿಕೊಂಡಿದೆ. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಈ ಕ್ಷಣದವರೆಗೆ ಫುಲ್ ಟ್ರಾಫಿಕ್ ಜಾಮ್ ಕಂಡು ಬಂದಿದೆ
ಚಾರ್ಮಾಡಿ ಘಾಟ್ ನ ರಸ್ತೆಯುದ್ದಕ್ಕೂ ಪ್ರೈವೇಟ್ ಬಸ್ಸು, ಗೂಡ್ಸ್ ವಾಹನಗಳು , ಇತರೆ ಖಾಸಗಿ ವಾಹನಗಳು ಚಲಿಸಲಾಗದೆ ಹರ ಸಾಹಸ ಪಡುತ್ತಿದೆ.
ಕಳೆದ ವಾರ ಸುರಿದ ಮಹಾಮಳೆಗೆ ಈ ರಸ್ತೆಯ 6 ನೇ ತಿರುವಿನಲ್ಲಿ ಗುಡ್ಡ ಕುಸಿದುಸುಗಮ ಸಂಚಾರಕ್ಕೆ ವಾಹನ ಚಾಲಕರು ಸಂಕಟಪಡುವಂತಾಗಿತ್ತು . ಅದಾದ ಬಳಿಕ ಅಧಿಕಾರಿಗಳ ತುರ್ತು ಸ್ಪಂದನೆಯಿಂದ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅದರೆ ಬೆಂಗಳೂರು – ಮಂಗಳೂರು ನಡುವೆ ಓಡಾಡುವ ಬಹುತೇಕ ವಾಹನ ಚಾಲಕರು ಇದೇ ರಸ್ತೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಈ ರೀತಿ ವಾಹನ ದಟ್ಟನೆ ಉಂಟಾಗಲು ಕಾರಣ ಎನ್ನಲಾಗುತ್ತಿದೆ ಅಲ್ಲದೇ ನಿನ್ನೆ ತಡ ರಾತ್ರಿ ಮಂಗಳೂರಿನಿಂದ ಹಾಸನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯೊಂದು ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ್ದ ವೇಳೆ ಅದರಲ್ಲಿ ಆಕಸ್ಮಿಕವಾಗಿ ಬೆಂಕಿಕಾಣಿಸಿಕೊಂಡಿತ್ತು . ಚೆಕ್ ಪೋಸ್ಟ್ ಸಿಬಂದಿಗಳ ಸಮಯ ಪ್ರಜ್ಞೆ ಹಾಗೂ ಬೆಳ್ತಂಗಡಿಯ ಅಗ್ನಿ ಶಾಮಕ ದಳ ಹಾಗೂ ಧರ್ಮಸ್ಥಳ ಪೊಲೀಸರ ಸೂಕ್ತ ಕಾರ್ಯಚಾರಣೆಯಿಂದ ಬೆಂಕಿ ನಂದಿಸಲಾಗಿತ್ತು. ಈ ಕಾರ್ಯಾಚಾರಣೆ ವೇಳೆಯೂ ಆ ರಸ್ತೆಯಲ್ಲಿ ಪೊಲೀಸರು ಕೆಲ ಕಾಲ ವಾಹನ ಸಂಚಾರ ನಿಲ್ಲಿಸಿದ್ದರು .ಇದೂ ಕೂಡ ಬೆಳಗಿನ ಸಮಯ ಈ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಕಾರಣ ಎಂದು ಹೇಳಲಾಗುತ್ತಿದೆ.