
ಮುಂಬೈ: ಖಾಸಗಿ ಬ್ಯಾಂಕ್’ನ ಸಹಾಯಕ ಮಹಿಳಾ ಮ್ಯಾನೇಜರ್’ಗೆ ಮಾಜಿ ಮ್ಯಾನೇಜರ್ ಇರಿದು ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪಾಲ್ಗಾಟ್ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಮಹಿಳಾ ಉದ್ಯೋಗಿ ಗಾಯಗೊಂಡಿದ್ದಾರೆ.
ಪಾಲ್ಗಾಟ್ ಜಿಲ್ಲೆಯ ವಿರಾರ್ ನ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ ಎಂದು ವರದಿ ತಿಳಿಸಿದೆ.
ಅಸಿಸ್ಟಂಟ್ ಮ್ಯಾನೇಜರ್ ಯೋಗಿತಾ ವರ್ತಕ್ ಹತ್ಯೆಯಾಗಿದ್ದು, ಕ್ಯಾಶಿಯರ್ ಶ್ರದ್ಧಾ ದೇವ್ರುಖಾರ್ ಗಾಯಗೊಂಡಿದ್ದಾರೆ. ಘಟನೆ ವೇಳೆ ಈ ಇಬ್ಬರು ಮಾತ್ರ ಬ್ಯಾಂಕ್ ನಲ್ಲಿದ್ದರು. ಇಬ್ಬರು ಆರೋಪಿಗಳಲ್ಲಿ ಅನಿಲ್ ದುಬೆ ಎಂಬಾತನನ್ನು ಬಂಧಿಸಲಾಗಿದೆ. ದುಬೆ ಇದೇ ಐಸಿಐಸಿಐ ಬ್ಯಾಂಕ್ ಶಾಖೆಯ ಮಾಜಿ ಮ್ಯಾನೇಜರ್ ಎಂದು ವಿರಾರ್ ಪೊಲೀಸ್ ಇನ್ಸ್ ಪೆಕ್ಟರ್ ಸುರೇಶ್ ವಾರ್ಡೆ ತಿಳಿಸಿದ್ದಾರೆ.
ಆರೋಪಿ ದುಬೆ ಹಾಗೂ ದುಬೆ ಸ್ನೇಹಿತ ನಗದು ಮತ್ತು ಚಿನ್ನಾಭರಣ ಕೊಡುವಂತೆ ಯೋಗಿತಾಗೆ ಒತ್ತಾಯಿಸಿದ್ದು ದರೋಡೆ ತಡೆಯಲು ಅಲಾರಾಂ ಒತ್ತಿದ್ದರು. ಈ ವೇಳೆ ಆರೋಪಿಗಳು ಯೋಗಿತಾ ಮತ್ತು ಶ್ರದ್ಧಾಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.