
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಲ್ವಾಡಿ ಎಂಬಲ್ಲಿ ಫೈನಾನ್ಸ್ ಮಾಲೀಕನನ್ನು ತಡರಾತ್ರಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಘಟನೆ ಶುಕ್ರವಾರ ಅವರದೇ ಫೈನಾನ್ಸ್ ನಲ್ಲಿ ನಡೆದಿದೆ.
ತಡರಾತ್ರಿ ಈ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ಫೈನಾನ್ಶಿಯರ್.
ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಅಜೇಂದ್ರ ಅವರು ಕಳೆದ 5 ವರ್ಷಗಳಿಂದ ಅಸೋಡು-ಕಾಳಾವರ ಎಂಬಲ್ಲಿ ಪಾಲುದಾರಿಕೆಯೊಂದಿಗೆ ಡ್ರೀಮ್ ಫೈನಾನ್ಸ್ ಎನ್ನುವ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. ಸಾಮಾಜಿಕ ಕಾರ್ಯಗಳನ್ ಕೂಡ ಅಜೇಂದ್ರ ತೊಡಗಿಸಿಕೊಂಡಿದ್ದರು.
ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾಗಿರುವ ಅಜೇಂದ್ರ ಶೆಟ್ಟಿ ತಡರಾತ್ರಿಯವರೆಗೆ ಮನೆಗೆ ವಾಪಾಸ್ಸಾಗಿರಲಿಲ್ಲ. ಮನೆಯವರು ಹುಡುಕಾಟ ಪ್ರಾರಂಭಿಸಿದ್ದಾರೆ, ನಂತರ ಎಲ್ಲೂ ಕಾಣಿಸದಿದ್ದಾಗ ಆತನ ಸ್ನೇಹಿತರು ಫೈನಾನ್ಸ್ ಗೆ ಹೋಗಿದ್ದಾರೆ. ಆ ವೇಳೆ ಫೈನಾನ್ಸ್ ಒಳಗೆ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.