
ಟೋಕಿಯೊ: ಇಂದು ನಡೆದ ಟೋಕಿಯೊ ಒಲಿಂಪಿಕ್ಸ್ ಮಹಿಳಾ ಹಾಕಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 1-0 ಅಂತರದಲ್ಲಿ ಗೆಲುವನ್ನು ಸಾಧಿಸಿದ ಭಾರತ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ತನ್ಮೂಲಕ ವನಿತಾ ಹಾಕಿಯಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ದಾಖಲೆಯನ್ನು ಭಾರತ ನಿರ್ಮಿಸಿದೆ.
ಗುರ್ಜಿತ್ ಕೌರ್ ಹೊಡೆದ ಗೋಲು ಭಾರತಕ್ಕೆ ವರದಾನವಾಗಿ ಪರಿಣಮಿಸಿತು. ಅತ್ಯುತ್ತಮ ಡಿಫೆನ್ಸ್ ಮೂಲಕ ಆಸ್ಟ್ರೇಲಿಯಾ ತಂಡದ ಬೆವರಿಳಿಸಿ ಬಿಟ್ಟ ಭಾರತದ ವನಿತೆಯರು, ಸರ್ವಾಂಗೀಣ ಪ್ರದರ್ಶನದ ಮೂಲಕ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.
ಆಗಸ್ಟ್ 4ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡವು ಅರ್ಜೆಂಟೀನಾ ಸವಾಲನ್ನು ಎದುರಿಸಲಿದೆ. ಮಗದೊಂದು ಕ್ವಾರ್ಟರ್‌ನಲ್ಲಿ ಅರ್ಜೆಂಟೀನಾ ತಂಡವು ಜರ್ಮನಿ ವಿರುದ್ಧ 3-0 ಗೋಲುಗಳ ಅಂತರದ ಗೆಲುವು ದಾಖಲಿಸಿತ್ತು. ಆ ಪಂದ್ಯ ಗೆದ್ದರೆ ಚಿನ್ನಕ್ಕಾಗಿ ಆಗಸ್ಟ್ 6ರಂದು ಕಣಕ್ಕಿಳಿಯಲಿದೆ.