
ಸಾಗರ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ನಿಷೇಧ ಹೇರಿದ್ದರಿಂದ ಖಾಲಿ ಖಾಲಿಯಾಗಿದ್ದ ಜೋಗ ಜಲಪಾತಕ್ಕೆ ರವಿವಾರ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಮೂರನೇ ಅಲೆ ಭೀತಿ ಇದ್ದರೂ ಭೌತಿಕ ಅಂತರವಿಲ್ಲದೆ ಮಾಸ್ಕ್ ಧರಿಸದೆ ಜಲಪಾತ ವೀಕ್ಷಣೆ ಹಾಗೂ ಮೊಬೈಲ್ ಸೆಲ್ಫಿ ಫೋಟೋಗಳ ಗುಂಗಿನಲ್ಲಿ ಮುಳುಗಿದ್ದರು.
ಪ್ರಕೃತಿ ಕೂಡ ಇಡೀ ದಿನ ಆಗೊಮ್ಮೆ ಈಗೊಮ್ಮೆ ಬಿಸಿಲು ತೋರಿ, ಮಳೆ ಸುರಿಸದೆ ಇದ್ದುದು ಪ್ರವಾಸಿಗರಿಗೆ ಜಲಪಾತದ ಭವ್ಯ ದರ್ಶನ ಒದಗಿ ಸಿತು. ಕಳೆದ ಕೆಲವು ದಿನದಿಂದ ಉತ್ತಮ ಮಳೆಯಾಗಿದ್ದರಿಂದ ಜಲಪಾತ ಮೈದುಂಬಿಕೊಂಡು ಧುಮ್ಮಿಕ್ಕುತ್ತಿದೆ.
ಖಾಸಗಿ ಕಾರು, ಪ್ರವಾಸಿ ವಾಹನಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜೋಗ ದತ್ತ ಪಯಣಿಸಿದ್ದರಿಂದ ಎನ್‌ಎಚ್ 206ನಲ್ಲಿ ಕಾರುಗಳ ರ್ಯಾಲಿ ನಡೆಯು ತ್ತಿದೆಯೇನೋ ಎಂಬ ದೃಶ್ಯ ಸಾಗರ- ಜೋಗದ ನಡುವೆ ಕಂಡುಬಂದಿತು. ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟು ಕೊನೆಗೆ ಕೈ ಚೆಲ್ಲಿದರು.