
ಬೆಳ್ತಂಗಡಿ : ಮಹಿಳೆಯೊಬ್ಬರು ಸುಲಭವಾಗಿ ಹಣ ಗಳಿಸುವ ಆಸೆಯಿಂದಾಗಿ 5 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ಚರ್ಚ್ ರೋಡ್ ನಿವಾಸಿ ಪೂರ್ಣಿಮಾ ಹಣ ಕಳೆದುಕೊಂಡ ಮಹಿಳೆ.
ಪೂರ್ಣಿಮಾರವರಿಗೆ ಅಪರಿಚಿತ ಸಂಖ್ಯೆಯಿಂದ ತಿಂಗಳಿಗೆ ಮೂರು ಸಾವಿರದಿಂದ ಎಂಟು ಸಾವಿರದವರೆಗೆ ಗಳಿಸಬಹುದು ಎಂಬ ಸಂದೇಶ ಬಂದಿತ್ತು. ಅದಕ್ಕೆ ಪೂರ್ಣಿಮಾ ಅವರು ಮೆಸೇಜ್ ಮಾಡಿ ಸಂಪರ್ಕಿಸಿದ್ದಾರೆ. ಆ ವೇಳೆ ಅಪರಿಚಿತ ವ್ಯಕ್ತಿಯು ಮಹಿಳೆಗೆ ಪುಸಲಾಯಿಸಿ ಅವರ ಬಳಿಯಿಂದ ಹಂತ ಹಂತವಾಗಿ ಹಣ ಪಡೆದುಕೊಂಡಿದ್ದಾರೆ. ಕ್ರೆಡಿಟ್ ಕಾರ್ಡ್ ಮೂಲಕ ಪೂರ್ಣಿಮಾ ಅವರು ಜೂನ್ ತಿಂಗಳಿನಿಂದ ಹಣ ಸಂದಾಯ ಮಾಡುತ್ತಾ ಬಂದಿದ್ದಾರೆ. ಜುಲೈ 5 ರಂದು ಆಕೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಹಣ ಸಂದಾಯ ಮಾಡಿರುವುದಾಗಿ ಹಾಗು ಒಟ್ಟು ಐದು ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಹಿಳೆ ದಕ್ಷಿಣ ಜಿಲ್ಲಾ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರಕಿದೆ.