ಪದವಿಪೂರ್ವ ಕಾಲೇಜು ಆಗಸ್ಟ್ 16ರಿಂದ ಆರಂಭ…!

ಆಗಸ್ಟ್ 16ರಿಂದ ಪ್ರಥಮ ಪಿಯು ತರಗತಿಗಳನ್ನು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುವ ಮೊದಲೇ ರಾಜ್ಯದ ಪ್ರತಿಷ್ಠಿತ ಕಾಲೇಜುಗಳು ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡಿವೆ.
ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ ಎಲ್ಲರೂ ತೇರ್ಗಡೆಯಾಗಿರುವುದರಿಂದ ಪಿಯುಸಿ ದಾಖಲಾತಿ ಪ್ರಮಾಣವೂ ಹೆಚ್ಚಾಗಲಿದೆ. ಹೀಗಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ಆ.೩೧ರೊಳಗೆ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಇಲಾಖೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.
ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಆ.೩೧ರವರೆಗೆ ದಾಖಲಾತಿ ಪಡೆಯಬಹುದಾಗಿದೆ. ಸೆಪ್ಟೆಂಬರ್ ೧ ರಿಂದ ೧೧ ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ ೬೭೦ ರೂ. ವಿಳಂಬ ಶುಲ್ಕ ಸಂಗ್ರಹಿಸಬೇಕು.
ಸೆ.೧೩ ರಿಂದ ೨೫ ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ ೨೮೯೦ ರೂ. ದಂಡ ಶುಲ್ಕ ಪಡೆಯುವಂತೆ ಇಲಾಖೆ ನಿರ್ದೇಶನ ನೀಡಿದೆ.
೨೦೨೧-೨೨ ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್‌ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗಿರುವುದರಿಂದ ಆ.೧೬ ರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ತರಗತಿಗಳನ್ನು ಆರಂಭಿಸಬೇಕು ಎಂದು ಎಲ್ಲ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆ ಸೂಚಿಸಿದೆ.